ಚೆನ್ನೈ, ಮೇ 17 : ಚೆನ್ನೈ ನಲ್ಲಿ ಕೊರೊನಾ ವೈರಸ್ ಸೋಂಕಿನಿಂದ 20 ಮಂದಿ ಕ್ಯಾನ್ಸರ್ ರೋಗಿಗಳು ಗುಣಮುಖರಾಗಿದ್ದಾರೆ. ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು , ಬಾಯಿ ಸೇರಿ ದೇಹದ ವಿವಿಧ ಭಾಗಗಳ ಕ್ಯಾನ್ಸರ್ ಪೀಡಿತ 20 ಮಂದಿ ರೋಗಿಗಳು ಕೊರೊನಾ ಸೋಂಕಿನ ವಿರುದ್ಧ ಜಯಗಳಿಸಿ ಸುದ್ದಿಯಾಗಿದ್ದಾರೆ. ಕ್ಯಾನ್ಸರ್ ಒಂದು ಮಾರಣಾಂತಿಕ ರೋಗವಾಗಿದ್ದು, ಅವರಲ್ಲಿ ಕೊರೊನಾ ಸೋಂಕು ಕೂಡ ದೃಢಪಟ್ಟಾಗ ಅದು ಹೆಚ್ಚಿನ ಆತಂಕಕ್ಕೆ ಕಾರಣವಾಗಿತ್ತು.
ಚೆನ್ನೈ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಒಳಗಾದ 29 ಕ್ಯಾನ್ಸರ್ ರೋಗಿಗಳಲ್ಲಿ 20 ಮಂದಿ ಗುಣಮುಖರಾಗಿದ್ದರೆ, ಇಬ್ಬರು ಸಾವನ್ನಪ್ಪಿದ್ದಾರೆ. 7 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವೈರಸ್ ಸೋಂಕು ಆರೋಗ್ಯವಂತ ವ್ಯಕ್ತಿಯಲ್ಲಿ ದೃಢಪಟ್ಟಾಗ ಅವರನ್ನು ಗುಣಪಡಿಸುವುದು ಕಷ್ಟಕರವಲ್ಲ. ಆದರೆ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಾಗ ಅದು ಬಹು ದೊಡ್ಡ ಸವಾಲನ್ನು ಒಡ್ಡುತ್ತದೆ ಎಂದು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಡೀನ್ ಜಯಂತಿ ರಂಗರಾಜನ್ ತಿಳಿಸಿದ್ದಾರೆ.








