ಮಡಿಕೇರಿ: ಹಸುಗಳು ಕಾಫಿ ತೋಟಕ್ಕೆ ಬರುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿಕೃತ ಮನಸ್ಸಿನ ಕಾಫಿ ತೋಟದ ಮ್ಯಾನೇಜರ್ ಹಾಗೂ ಸಿಬ್ಬಂದಿ ಬಾಳೆಹಣ್ಣಿನಲ್ಲಿ ವಿಷ ಹಾಕಿ 20 ಹಸುಗಳನ್ನು ಸಾಯಿಸಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.
ಸೋಮವಾರ ಪೇಟೆ ತಾಲೂಕಿನ ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದೆ. ಐಗೂರಿನ ಟಾಟಾ ಎಸ್ಟೇಟ್‍ನ ಒಳಗೆ ದನಗಳು ಹೋಗುತ್ತಿರುವುದನ್ನು ತಪ್ಪಿಸಲು ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಬಾಳೆ ಹಣ್ಣಿಗೆ ವಿಷಹಾಕಿ ಹಸುಗಳಿಗೆ ತಿನ್ನಿಸಿದ್ದಾರೆ. ಬಾಳೆಹಣ್ಣು ತಿಂದ 20 ಹಸುಗಳು ಸಾವನ್ನಪ್ಪಿವೆ.

ಸತ್ತ ಹಸುಗಳ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್‍ನಲ್ಲಿರುವ ದೊಡ್ಡ ಕಂದಕಕ್ಕೆ ಹಾಕಿ ಅದರ ಮೇಲೆ ಮರಗಳನ್ನು ಕಡಿದು ಹಾಕಿದ್ದಾರೆ. ಹಸುಗಳು ಕಾಣೆಯಾದ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಹುಡುಕಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರ ಬೆಂಬಲಕ್ಕೆ ನಿಂತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಎಸ್ಟೇಟ್‍ನ ಮ್ಯಾನೇಜರ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಸುಳ್ಳು ಹೇಳಿದ ಎಸ್ಟೇಟ್ ಮ್ಯಾನೇಜರ್, ಗ್ರಾಮಸ್ಥರು ಗಲಾಟೆ ಮಾಡುತ್ತಿದ್ದಂತೆ ಒಪ್ಪಿಕೊಂಡಿದ್ದಾನೆ.
ಎಸ್ಟೇಟ್‍ನ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಸ್ಟೇಟ್ ಮ್ಯಾನೇಜರ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ಗರ್ಭಿಣಿ ಆನೆಗೆ ಬಾಂಬ್ ಇಟ್ಟು ಸಾಯಿಸಿದ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.









