2024ರ ಟಿ 20 ವಿಶ್ವಕಪ್ ನಲ್ಲಿ ಸೆಣಸಾಡಲಿವೆ 20 ತಂಡಗಳು
ದುಬೈ : ಟಿ 20 ಕ್ರಿಕೆಟ್ ಅನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಜನಪ್ರಿಯಗೊಳಿಸಲು ಐಸಿಸಿ ಪ್ಲಾನ್ ಮಾಡಿಕೊಂಡಿದ್ದು, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 16ರಿಂದ 20ಕ್ಕೆ ಏರಿಸಲು ಚಿಂತನೆ ನಡೆಸಿದೆ.
ಈ ಬಾರಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಪೂರ್ವನಿಗದಿಯಂತೆ 16 ತಂಡಗಳೇ ಆಡಲಿದೆ. ಆದ್ರೆ 2024ರ ಆವೃತ್ತಿಗೆ 4 ಹೊಸ ತಂಡಗಳನ್ನು ಸೇರಿಸಲು ಐಸಿಸಿ ಯೋಜನೆ ಹಾಕಿಕೊಂಡಿದೆ. ಈ 20 ತಂಡಗಳನ್ನು ತಲಾ 5ರಂತೆ 4 ಗುಂಪುಗಳಲ್ಲಿ ವಿಭಾಗಿಸಲಾಗುವುದು ಎಂದೂ ಹೇಳಲಾಗಿದೆ.
ಇತ್ತ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 2026ರ ಆವೃತ್ತಿಯಲ್ಲಿ 10ರಿಂದ 12ಕ್ಕೆ ಏರಿಸಲಾಗುವುದು ಎಂದು ಐಸಿಸಿ ಈಗಾಗಲೆ ಖಚಿತಪಡಿಸಿದೆ. ಮಹಿಳಾ ಏಕದಿನ ವಿಶ್ವಕಪ್‍ನಲ್ಲೂ 2029ರ ವೇಳೆಗೆ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸುವುದಾಗಿ ತಿಳಿಸಿದೆ.
ಕೇವಲ ಟಿ 20 ಮಾತ್ರವಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು ಮತ್ತೆ 14ಕ್ಕೆ ಏರಿಸುವ ಬಗ್ಗೆಯೂ ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. 2007ರ ಏಕದಿನ ವಿಶ್ವಕಪ್‍ನಲ್ಲಿ ಗರಿಷ್ಠ 16 ತಂಡಗಳು ಆಡಿದ್ದವು. 2011ರಲ್ಲಿ ಇದು 14ಕ್ಕೆ ಇಳಿದಿತ್ತು. 2019ರಲ್ಲಿ 10ಕ್ಕೆ ಇಳಿದಿತ್ತು.










