ಬೆಂಗಳೂರು: ಇತ್ತೀಚೆಗೆ ರಾಜ್ಯ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿ ಕುಡಿದು ವಾಹನ ಚಲಾಯಿಸುವುದರಿಂದಾಗಿ ಸಾಕಷ್ಟು ಅವಾಂತರಗಳು ನಡೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಡ್ರಂಕ್ ಆಂಡ್ ಡ್ರೈವ್ ವಿರುದ್ಧ ಸಿಡಿದೆದ್ದಿದ್ದಾರೆ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಒಂದೇ ದಿನ 200 ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ನಗರ ಸಂಚಾರ ಪೊಲೀಸರು ಒಂದೇ ದಿನದಲ್ಲಿ 200 ಪ್ರಕರಣ ದಾಖಲಿಸಿದ್ದಾರೆ. ಕೋರಮಂಗಲದಲ್ಲೇ 40 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಯಾರೂ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ನೋಡಿಕೊಳ್ಳಲು ಕ್ರಮವಹಿಸಿದ್ದೇವೆ ಎಂದು ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಪೊಲೀಸರು ಶುಕ್ರವಾರ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಮದ್ಯಪಾನ ಮಾಡಿದ ಚಾಲಕರು ಮತ್ತು ಸವಾರರ ವಿರುದ್ಧ 201 ಪ್ರಕರಣಗಳು ದಾಖಲಾಗಿವೆ. ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ 34,676 ವಾಹನಗಳನ್ನು ತಪಾಸಣೆ ನಡೆಸಿ, 779 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಬಿಎಂ ಹೇಳಿದ್ದಾರೆ.
ಆಡುಗೋಡಿಯಲ್ಲಿ 1,783 ವಾಹನಗಳ ತಪಾಸಣೆ ನಡೆಸಲಾಗಿದ್ದು, 41 ಡ್ರಂಕ್ & ಡ್ರೈವ್ ಕೇಸ್ ದಾಖಲಾಗಿದೆ. ಆಡುಗೋಡಿ ಮೊದಲ ಸ್ಥಾನದಲ್ಲಿದೆ. 1,678 ವಾಹನಗಳ ಪೈಕಿ 19 ಪ್ರಕರಣ ದಾಖಲಾಗಿವೆ. ಜಯನಗರ ಮತ್ತು ಬನಶಂಕರಿಯಲ್ಲಿ 17 ಹಾಗೂ 8 ಪ್ರಕರಣಗಳು ದಾಖಲಾಗಿವೆ.








