ಕೊಲೊಂಬೋ: 2011ರಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು. ಈ ಮೂಲಕ 2011ರ ವಿಶ್ವಕಪ್ ಭಾರತಕ್ಕೆ ಸೇಲಾಗಿದೆ ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುಥಗಮೆ ಗಂಭೀರ ಆರೋಪ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಹೈವೋಲ್ಟೇಜ್ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ನೇತೃತ್ವದ ಭಾರತ ತಂಡ, ಶ್ರೀಲಂಕಾವನ್ನು 6 ವಿಕೆಟ್‍ಗಳಿಂದ ಸೋಲಿಸಿ ಕಪಿಲ್‍ದೇವ್ ನಂತರ ಎರಡನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.
ಧೋನಿ ನಾಯಕತ್ವದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಶ್ರೀಲಂಕಾವನ್ನು ಫೈನಲ್ ಸುತ್ತಿನಲ್ಲಿ ಮಣಿಸಲು ಸಾಧ್ಯವಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಮಹೇಲ ಜಯವರ್ದನೆ ಅವರ ಸ್ಪೋಟಕ ಶತಕ(103)ದ ಬಲದಿಂದ 50 ಓವರ್‍ಗಳಲ್ಲಿ 274 ರನ್ ಗಳಿಸಿ ಟೀಂ ಇಂಡಿಯಾಕ್ಕೆ 275ರನ್‍ಗೆ ಟಾರ್ಗೆಟ್ ನೀಡಿತ್ತು.
ಆದರೆ ಟಿವಿ ಸಂದರ್ಶನವೊಂದರಲ್ಲಿ ಫಿಕ್ಸಿಂಗ್ ಆರೋಪ ಮಾಡಿರುವ ಮಾಜಿ ಸಚಿವ ಮಹಿಂದಾನಂದ, ಗೌತಮ್ ಗಂಭೀರ್ 97 ರನ್ ಹಾಗೂ ಧೋನಿ ಅವರ 91 ರನ್‍ಗಳ ಜಾಣ್ಮೆಯ ಆಟ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ಎಂದು ಭಾರತ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.
2011ರ ವಿಶ್ವಕಪ್ ಯಾಕೆ ಮಾರಾಟ ಆಯ್ತು ಎಂದು ಹೇಳುತ್ತಿದ್ದೇನೆಂದರೆ ಆಗ ನಾನು ಕ್ರೀಡಾ ಮಂತ್ರಿಯಾಗಿದ್ದೆ. ಹೀಗಾಗಿ ನನಗೆ ಈ ವಿಚಾರ ಗೊತ್ತು ಎಂದು ಹೇಳಿಕೊಂಡಿದ್ದಾರೆ.
ಈ ಪಂದ್ಯವನ್ನು ಶ್ರೀಲಂಕಾ ಗೆದ್ದೇ ಗೆಲ್ಲುತ್ತಿತ್ತು. ಮ್ಯಾಚ್ ಫಿಕ್ಸಿಂಗ್‍ನಿಂದಾಗಿ ವಿಶ್ವಕಪ್ ನಮಗೆ ದಕ್ಕಲಿಲ್ಲ. ದೇಶದ ಕ್ರೀಡಾ ಸಚಿವನಾಗಿ ನಾನು ಈ ಸಂಗತಿಯನ್ನು ಅಂದು ಹೇಳಲು ಸಾಧ್ಯವಿರಲಿಲ್ಲ ಎಂದಿದ್ದಾರೆ.
ಈ ಮಾತನ್ನು ತುಂಬಾ ಜವಾಬ್ದಾರಿಯಿಂದಲೇ ಹೇಳುತ್ತಿದ್ದೇನೆ. 2011ರ ವಿಶ್ವಕಪ್ ಫಿಕ್ಸ್ ಆಗಿತ್ತು. ಈ ಬಗ್ಗೆ ಎಲ್ಲಿ ಬೇಕಾದರೂ ನಾನು ಚರ್ಚೆಗೆ ಸಿದ್ಧ ಎಂದು ಮಹಿಂದಾನಂದ ತಿಳಿಸಿದ್ದಾರೆ.
ದಾಖಲೆ ಇದ್ರೆ ಬಹಿರಂಗಪಡಿಸಿ-ಸಂಗಕ್ಕರ ಸವಾಲು
2011ರ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಆಗಿರುವ ಬಗ್ಗೆ ನಿಮ್ಮ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಿ. ಜತೆಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದಾಖಲೆ ಕೊಡಲಿ ಎಂದು ಮಾಜಿ ಕ್ಯಾಪ್ಟನ್ ಕುಮಾರ ಸಂಗಕ್ಕರ ಸವಾಲು ಹಾಕಿದ್ದಾರೆ.
ಈಗಲೂ ಕೂಡ ಕಾಲ ಮಿಂಚಿಲ್ಲ. ಮಹಿಂದಾನಂದ ಅವರು ಕೊಟ್ಟ ದಾಖಲೆ ಆಧರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಭದ್ರತಾ ಘಟಕ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಲಿ ಎಂದು ಸಂಗಕ್ಕರ ಟ್ವಿಟ್ಟರ್‍ನಲ್ಲಿ ತಿರುಗೇಟು ನೀಡಿದ್ದಾರೆ.
ಈ ಫಿಕ್ಸಿಂಗ್‍ನಲ್ಲಿ ಲಂಕಾ ಆಟಗಾರರು ಶಾಮೀಲಾಗಿಲ್ಲ. ಆದರೆ, ಕೆಲ ಶಕ್ತಿಗಳ ಇದರ ಹಿಂದೆ ಇವೆ ಎಂದು ಮಹಿಂದಾನಂದ ಗಂಭೀರ ಆರೋಪ ಮಾಡಿದ್ದಾರೆ.
ರಾಜಪಕ್ಷೆ ಜತೆ ಕುಳಿತಿದ್ದ ಮಹಿಂದಾನಂದ
2011ರ ವಿಶ್ವಕಪ್ ಫೈನಲ್ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಾಗ ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಕೂಡ ಉಪಸ್ಥಿತರಿದ್ದರು. ರಾಜಪಕ್ಷ ಜತೆಗೆ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುಥಗಮಗೆ ಕುಳಿತಿದ್ದರು.
ಮಹಿಂದಾನಂದ ಆರೋಪಕ್ಕೆ ಮಾಜಿ ಕ್ಯಾಪ್ಟನ್ ಅರ್ಜುನ್ ರಣತುಂಗಾ ಸಹ ಕಿಡಿಕಾರಿದ್ದು, 2011ರಲ್ಲಿ ಆಗಿದ್ದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.








