ಬೆಂಗಳೂರು: 2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ನಟ ಸುದೀಪ್ ‘ಅತ್ಯುತ್ತಮ ನಟ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
‘ಪೈಲ್ವಾನ್’ ಚಿತ್ರದಲ್ಲಿನ ನಟನೆಗೆ ಸುದೀಪ್ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನಟಿ, ನಿರೂಪಕಿ ಅನುಪಮಾ ಗೌಡ ಅವರಿಗೆ 2019ನೇ ಸಾಲಿನ ‘ಅತ್ಯುತ್ತಮ ನಟಿ’ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಪೈಲ್ವಾನ್’ ಸಿನಿಮಾಗೆ ಎಸ್. ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದರು. ಈಗ ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ಪಡೆದ ಸುದೀಪ್ ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಪಿ. ಶೇಷಾದ್ರಿ ನಿರ್ದೇಶನ ಮಾಡಿದ ‘ಮೋಹನದಾಸ’ ಸಿನಿಮಾಗೆ ‘ಅತ್ಯುತ್ತಮ ಚಿತ್ರ’, ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್’ 2ನೇ ‘ಅತ್ಯುತ್ತಮ ಸಿನಿಮಾ’, ‘ಅರ್ಘ್ಯಂ’ 3ನೇ ಅತ್ಯುತ್ತಮ ಸಿನಿಮಾ, ‘ಕನ್ನೇರಿ’ ಚಿತ್ರಕ್ಕೆ ‘ವಿಶೇಷ ಸಾಮಾಜಿಕ ಕಾಳಜಿಯ ಸಿನಿಮಾ’ ಪ್ರಶಸ್ತಿ ಪಡೆದಿವೆ. ತಬಲಾ ನಾಣಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.








