2020ರ ಏಷ್ಯಾಕಪ್ ಟೂರ್ನಿ ಮುಂದೂಡಿಕೆ – ಅಧಿಕೃತವಾಗಿ ಘೋಷಣೆ ಮಾಡಿದ ಎಸಿಸಿ
ಕೊರೋನಾ ವೈರಸ್ ಹಾವಳಿಯಿಂದ 2020ರ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಹಿಂದೆ ನಿಗದಿಪಡಿಸಿದಂತೆ ಸೆಪ್ಟಂಬರ್ ನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಪಾಕಿಸ್ತಾನ ಆತಿಥ್ಯವನ್ನೂ ವಹಿಸಿತ್ತು. ಆದ್ರೆ ಪಾಕ್ ನೆಲದಲ್ಲಿ ಭಾರತ ಆಡಲು ಹಿಂದೇಟು ಹಾಕಿರುವ ಕಾರಣ ಟೂರ್ನಿಯು ತಟಸ್ಥ ತಾಣವಾಗಿರುವ ಯುಎಇನಲ್ಲಿ ಆಯೋಜಿಸಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಅದೇ ರೀತಿ ಶ್ರೀಲಂಕಾ ಕೂಡ ಟೂರ್ನಿಯನ್ನು ಸಂಘಟಿಸಲು ಆಸಕ್ತಿ ವಹಿಸಿತ್ತು.
ಇದೀಗ ವಿಶ್ವದೆಲ್ಲೆಡೆ ಕೊವಿಡ್-19 ಸೋಂಕಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಆಟಗಾರರ ಸುರಕ್ಷತೆಯ ಹಿತದೃಷ್ಟಿ ಹಾಗೂ ದೇಶ ದೇಶಗಳ ನಡುವೆ ಪ್ರಯಾಣಕ್ಕೂ ನಿರ್ಬಂಧ, ಕ್ವಾರಂಟೈನ್ ಮಾರ್ಗಸೂಚಿಗಳು ಹಾಗೂ ಪ್ರಾಯೋಜಕರ ಕೊರತೆ ಹೀಗೆ ಹಲವಾರು ಕಾರಣಗಳಿಂದಾಗಿ ಟೂರ್ನಿಯನ್ನು ರದ್ದುಗೊಳಿಸಲು ಎಸಿಸಿ ತೀರ್ಮಾನಿಸಿದೆ.
ಇದೀಗ 2021ರ ಏಷ್ಯಾಕಪ್ ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಅದೇ ರೀತಿ 2022 ಏಷ್ಯಾಕಪ್ ಟೂರ್ನಿ ಪಾಕಿಸ್ತಾನ ಆಯೋಜನೆ ಮಾಡಲಿದೆ.
2020ರ ಏಷ್ಯಾಕಪ್ ಟೂರ್ನಿಯ ಬಗ್ಗೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆಯೇ ರದ್ದುಗೊಂಡಿದೆ ಎಂದು ಹೇಳಿದ್ದರು. ಗಂಗೂಲಿ ಹೇಳಿಕೆಗೆ ಪಾಕ್ ಕ್ರಿಕೆಟ್ ಮಂಡಳಿ ಅಪಸ್ವರದ ಹೇಳಿಕೆಯನ್ನು ನೀಡಿತ್ತು. ಗಂಗೂಲಿ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಯಾಕಂದ್ರೆ ಏಷ್ಯಾಕಪ್ ಟೂರ್ನಿಯ ಭವಿಷ್ಯವನ್ನು ನಿರ್ಧಾರ ಮಾಡೋದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಎಂದು ಪಾಕ್ ಕ್ರಿಕೆಟ್ ಮಂಡಳಿಯ ವಕ್ತಾರರೊಬ್ಬರು ತಿರುಗೇಟು ನೀಡಿದ್ದರು. ಇದೀಗ ಏಷ್ಯನ್ ಕ್ರಿಕೆಟ್ ಸಮಿತಿಯೇ ಅಧಿಕೃತವಾಗಿ ಹೇಳಿಕೆ ನೀಡಿದೆ.