2020ರ ಪ್ರಮುಖ ಘಟನೆಗಳು : ರಾಮಮಂದಿರ ಟು ಕೊರೊನಾ 2.0
ನವದೆಹಲಿ : ಸಿಎಎ ಪ್ರತಿಭಟನೆ, ರಾಮಮಂದಿರ ಶಂಕು ಸ್ಥಾಪನೆ. ನಮಸ್ತೆ ಟ್ರಂಪ್ ಕಾರ್ಯಕ್ರಮ, ಮಧ್ಯಪ್ರದೇಶದಲ್ಲಿ ಅರಳಿದ ಕಮಲ. ಭಾರತಕ್ಕೆ ಕೊರೊನಾ ಎಂಟ್ರಿ, ಲಾಕ್ ಡೌನ್ ನಲ್ಲಿ ಪ್ರವಾಸಿಗರ ಕಣ್ಣೀರು. ನಿರ್ಭಯಾ ಹಂತಕರಿಗೆ ಗಲ್ಲು, ಸೈಕ್ಲೋನ್ ಜೊತೆ ಮಿಡತೆ ದಾಳಿ. ಗಡಿಯಲ್ಲಿ ಗಲ್ವಾನ್ ಸಂಘರ್ಷ.. ಬಾಲಿವುಡ್ ದೋನಿ ಸೂಸೈಡ್. ಭಾರತಕ್ಕೆ ರಾಫೆಲ್ ಆಗಮನ.. ಕೊರೊನಾ ಮಧ್ಯೆ ಬಿಹಾರ ಚುನಾವಣೆ.. ಯುಎಇನಲ್ಲಿ ಐಪಿಎಲ್, ಕುಸಿದ ಜಿಡಿಪಿ, ದೆಹಲಿಯಲ್ಲಿ ರೈತರ ಪ್ರೊಟೆಸ್ಟ್.. ಇದು 2020ರ ಹೈಲೆಟ್ಸ್..
ಹೌದು..! 2020. ಎಂದೂ ಯಾರೂ ಮರೆಯದ ವರ್ಷವಾಗಿ ಚರಿತ್ರೆಯಲ್ಲಿ ನಿಂತಿದೆ. ಈ ಹಿಂದೆ ಎಂದೂ ಕಾಣದ, ಪಡದ ಕಷ್ಟಗಳನ್ನ ಜನರು ಈ ವರ್ಷದಲ್ಲಿ ಅನುಭವಿಸಿದ್ದಾರೆ. ಲಕ್ಷಾಂತರ ಕಾರ್ಮಿಕರು ಲಾಕ್ ಡೌನ್ ನಲ್ಲಿ ಅನಾಥರಂತೆ ಮೈಲಿಗಟ್ಟಲೆ ನಡೆದಿದ್ದು, ಇದೇ ಮೊದಲು. ಸುಮಾರು 90 ದಿನಗಳ ಕಾಲ ಜನರು ಮನೆಯಲ್ಲಿ ಸುಮ್ಮನೇ ಕುಳಿತಿದ್ದೂ ಇದೇ ಮೊದಲ. ಅಂದ್ರೆ ಹಲವು ಮೊದಲುಗಳಿಗೆ 2020 ಸಾಕ್ಷಿ. ಇನ್ನು ನೋವು, ಕಷ್ಟ, ಸಮಸ್ಯೆಗಳನ್ನು ಈ 2020 ತನ್ನ ಜೊತೆ ಹೊತ್ತು ತಂದಿತ್ತು. ಹಾಗೆ ಪ್ರತಿಯೊಬ್ಬರಿಗೂ ಈ 2020 ಒಂದೊಂದು ಪಾಠ ಕಲಿಸಿ ಹೋಗುತ್ತಿದೆ. ಹಾಗೇ ಈ ವರ್ಷ ಕೆಲ ಐತಿಹಾಸ ಘಟನೆಗಳಿಗೆ ಸಾಕ್ಷಿಯಾಗಿದ್ದು, ಅವುಗಳ ಝಲಕ್ ಇಲ್ಲಿದೆ.
ಒಂದನೇ ಪ್ರಮುಖ ಘಟನೆ : ಸಿಎಎ ಮತ್ತು ಎನ್ ಆರ್ ಸಿ ಪ್ರತಿಭಟನೆ
ಈ 2020, ಸಿಎಎ ಮತ್ತು ಎನ್ ಆರ್ ಸಿಗಳ ವಿರುದ್ಧದ ಪ್ರತಿಭಟನೆಗಳೊಂದಿಗೆ ಆರಂಭವಾಯ್ತು. ಕೇಂದ್ರ ತಂದ ಮಸೂದೆಗಳನ್ನು ವಿರೋಧಿಸಿ ದೇಶದಲ್ಲಿ ತೀವ್ರಸ್ವರೂಪದ ಹೋರಾಟಗಳು ನಡೆದ್ವು. ರಾಜಕೀಯವಾಗಿ ಕೆಸರೆರಚಾಟಕ್ಕೂ ಇದು ಕಾರಣವಾಗಿತ್ತು. ಮುಖ್ಯವಾಗಿ ಫೆಬ್ರವರಿಯಲ್ಲಿ ನಡೆದ ಕೋಮು ಗಲಭೆ 53 ಜನ ಪ್ರಾಣ ತೆಗೆದುಕೊಳ್ತು. ಎಷ್ಟೊ ಮನೆಗಳು ನಾಶವಾದ್ವು, ಅಂಗಡಿಗಳು ಬೆಂಕಿಯ ಕೆನ್ನಾಳಿಗೆಯಲ್ಲಿ ಧಗ ಧಗಿಸಿದ್ವು. ಈ ಪ್ರತಿಭಟನೆ ವಿಶ್ವದಾದ್ಯಂತ ಸದ್ದು ಮಾಡ್ತು.
ಎರಡನೇ ಪ್ರಮುಖ ಘಟನೆ : ನಮಸ್ತೆ ಟ್ರಂಪ್ ಕಾರ್ಯಕ್ರಮ
ಸಿಎಎ ಎನ್ ಆರ್ ಸಿ ಪ್ರತಿಭಟನೆ ಮಧ್ಯೆ ಫೆಬ್ರವರಿ 24 ರಂದು ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದರು. ಈ ಹಿನ್ನಲೆ ಕೇಂದ್ರ ಸರ್ಕಾರ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಯ್ತು.. ಇದರಿಂದಾದ ಪ್ರಯೋಜನೆ ಏನು ಅಂತ ಮೋದಿಯವರೇ ತಿಳಿಸಬೇಕು.
ಮೂರನೇ ಪ್ರಮುಖ ಘಟನೆ : ಭಾರತಕ್ಕೆ ಕೊರೊನಾ ಎಂಟ್ರಿ
ಕೊರೊನಾ ವೈರಸ್ ಅನ್ನು ನೂರು ವರ್ಷ ಕಳೆದರೂ ಯಾರು ಮರೆಯಲು ಸಾಧ್ಯವಿಲ್ಲ. ಜನರನ್ನ ನಿದ್ದೆಯಲ್ಲೂ ಬೆಚ್ಚಿಬೀಸಿದ್ದ ಹೆಮ್ಮಾರಿ ಈ ಕೊರೊನಾ. 2020 ಅಂದ್ರೆ ಮೊದಲಿಗೆ ನೆನಪಿಗೆ ಬರೋದೇ ಈ ಮಹಾಮಾರಿ ಕೊರೊನಾ ವೈರಸ್. ಅಷ್ಟರ ಮಟ್ಟಿಗೆ ಈ ವೈರಸ್ ಎಲ್ಲರನ್ನೂ ಆವರಿಸಿಕೊಂಡಿದೆ. ಅಸಲಿಗೆ ಈ ವೈರಸ್ ಭಾರತಕ್ಕೆ ಜನವರಿಯಲ್ಲೇ ಎಂಟ್ರಿಕೊಟ್ಟಿತ್ತು ಅಂತ ಹೇಳಲಾಗುತ್ತೆ. ಆದ್ರೆ ಕರ್ನಾಟಕದಲ್ಲಿ ಮಾರ್ಚ್ 17 ರಂದು ಅಧಿಕೃತವಾಗಿ ಕಾಣಿಸಿಕೊಳ್ತು. ಕಲಬುರಗಿಯಲ್ಲಿ ಈ ವೈರಸ್ ಮೊದಲ ಬಲಿ ಪಡೆದ ಬಳಿಕ ಇಡೀ ದೇಶವೇ ಅಕ್ಷರಶಃ ನಡುಗಿತ್ತು. ಇನ್ನು ಈ ಹೆಮ್ಮಾರಿ ಈಗಲೂ ಜನರನ್ನ ಕಾಡುತ್ತಿದ್ದು,ದೇಶದಲ್ಲಿ 1 ಕೋಟಿಗೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಒಂದೂವರೆ ಲಕ್ಷದಷ್ಟು ಪ್ರಾಣ ಕಳೆದುಕೊಂಡಿದ್ದಾರೆ.
ನಾಲ್ಕನೇ ಪ್ರಮುಖ ಘಟನೆ : ವಿಮಾನ ಹಾರಾಟ ಬಂದ್
ಕೊರೊನಾ ಹಿನ್ನೆಲೆ ವಿಶ್ವದಾದ್ಯಂತ ವಿಮಾನ ಹಾರಾಟವನ್ನ ಬಂದ್ ಮಾಡಲಾಗಿತ್ತು. ಬಹುಶಃ ವಿಮಾನಗಳು ತಯಾರಾದ ಬಳಿಕ ಅವು ಹಾರದೇ ಸುಮ್ಮನೆ ಇದ್ದದ್ದು, ಇದೇ ಮೊದಲನಿಸುತ್ತೆ. ವಿಮಾನ ಹಾರಾಟ ಬಂದ್ ನಿಂದಾಗಿ ಬೇರೆ ದೇಶದಲ್ಲಿದ್ದ ಭಾರತೀಯರು ವಾಪಸ್ ಭಾರತಕ್ಕೆ ಬರಲಾಗದೇ ಸಂಕಷ್ಟ ಅನುಭವಿಸಿದರು.
ಐದನೇ ಪ್ರಮುಖ ಘಟನೆ : ಕೊರೊನಾ ಲಾಕ್ ಡೌನ್
ಕೊರೊನಾ ತಡೆಗಾಗಿ ಕೇಂದ್ರ ಸರ್ಕಾರ ಮಾರ್ಚ್ 25 ರಂದು 21 ದಿನಗಳ ಕಾಲ ಇಡೀ ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡ್ತು. ಅಲ್ಲಿಯವರೆಗೂ ದೇಶದ ಜನರು ಎಂದೂ ಕೇಳದ ಪದ ಲಾಕ್ ಡೌನ್, ಎಲ್ಲರನ್ನೂ ಆತಂಕಕ್ಕೆ ದೂಡ್ತು. ಏಕಾಏಕಿ ಲಾಕ್ ಡೌನ್ ಘೋಷಣೆಯಿಂದಾಗಿ ವಲಸೆ ಕಾರ್ಮಿಕರು, ಬಡವರು ಒಂದೊತ್ತಿನ ಊಟಕ್ಕೂ ಪರದಾಡುವಂತಾಯಿತು. ಬಸ್, ರೈಲು ಇಲ್ಲದೇ ವಲಸೆ ಕಾರ್ಮಿಕರು ಗಂಟು ಮೂಟೆಕಟ್ಟಿಕೊಂಡು ಸಾವಿರಾರು ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡೇ ಊರು ತಲುಪಿದರು. ಈ ದೃಶ್ಯವಳಿಗಳು ಎಲ್ಲರ ಮನಕಲುಕಿಸಿದ್ವು. ಹಲವು ಕಣ್ಣೀರು ಹಾಕಿದರು. ವಲಸೆ ಕಾರ್ಮಿಕರ ಕಷ್ಟ ನೋಡುಗರ ಕರುಳು ಕಿತ್ತು ಬರುವಂತೆ ಮಾಡಿತ್ತು. ಲಾಕ್ ಡೌನ್ ನಿಂದಾಗಿ ಸಂಪೂರ್ಣ ಭಾರತ ಸ್ತಬ್ಧವಾಯಿತು. ಸಿನಿಮಾ, ಕ್ರೀಡೆ, ಜಾತ್ರೆ ಸೇರಿದಂತೆ ಎಲ್ಲವೂ ನಿಂತು ಹೋಯ್ತು.
ಆರನೇ ಪ್ರಮುಖ ಘಟನೆ : ನಿರ್ಭಯಾ ಹಂತಕರಿಗೆ ಗಲ್ಲು
2012 ಡಿಸೆಂಬರ್ 16 ರಂದು ನಡೆದ ನಿರ್ಭಯಾ ಕೇಸ್ ನ ಅಪರಾಧಿಗಳನ್ನು ಈ ವರ್ಷ ಗಲ್ಲಿಗೇರಿಸಲಾಯಿತು.
ಏಳನೇ ಪ್ರಮುಖ ಘಟನೆ : ಕೊರೊನಾ ಮಧ್ಯೆ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ
ಒಂದು ಕಡೆ ದೇಶದ ಜನರು ಕೊರೊನಾದಿಂದ ತಲೆಕೆಡಿಸಿಕೊಂಡಿದ್ದರೇ ಮಧ್ಯಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನ ಬೀಳಿಸುವ ಪ್ಲಾನ್ ಮಾಡಿತ್ತು. ಅದರಂತೆ ಆಪರೇಷನ್ ಕಮಲ ಮಾಡಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿತ್ತು.
ಏಂಟನೇ ಪ್ರಮುಖ ಘಟನೆ : ಸೈಕ್ಲೋನ್ ಜೊತೆ ಮಿಡತೆ ದಾಳಿ
ಕೊರೊನಾ ಮಧ್ಯೆ ದೇಶದ ಕೆಲ ರಾಜ್ಯಗಳು ಸೈಕ್ಲೋನ್ ಗೆ ತತ್ತರಿಸಿ ಹೋದವು. ಚಂಡಮಾರುತ್ತದ ಬಳಿಕ ಪಾಕಿಸ್ತಾನದಿಂದ ಬಂದ ಮಿಡತೆಗಳು ಅನ್ನದಾತರಿಗೆ ಪೆಟ್ಟು ನೀಡಿದ್ದವು.
ಒಂಬತ್ತನೇ ಪ್ರಮುಖ ಘಟನೆ : ಗಲ್ವಾನ್ ಸಂಘರ್ಷ, ಯುದ್ಧದ ಸನ್ನಿವೇಷ
ಕೊರೊನಾ ಲಾಕ್ ಡೌನ್ ಬಳಿಕ ಲಡಾಕ್ ನ ಗಲ್ವಾನ್ ಬಳಿ ನಡೆದ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷ ದೇಶದ ಗಮನ ಸೆಳೆಯಿತು. ಇನ್ನೇನು ಯುದ್ಧ ಆಗಿಯೇ ಬಿಡ್ತು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಘರ್ಷದಲ್ಲಿ ಭಾರತದ 20 ಮಂದಿ ಹುತಾತ್ಮರಾಗಿದ್ದರೇ ಚೀನಾದ 40 ಮಂದಿ ಸಾವನ್ನಪ್ಪಿದ್ದರು.
10ನೇ ಪ್ರಮುಖ ಘಟನೆ : ಚೀನಾ ಮೇಲೆ ಡಿಜಿಟಲ್ ಸ್ಟೈಕ್
ಗಲ್ವಾನ್ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿತ್ತು. ಚೀನಾದ 100ಕ್ಕೂ ಹೆಚ್ಚು ಆಪ್ ಗಳನ್ನು ಬ್ಯಾನ್ ಮಾಡಿ, ಟಕ್ಕರ್ ನೀಡ್ತು. ಪರಿಸ್ಥಿತಿ ಈಗಲೂ ಬೂದಿ ಮುಂಚ್ಚಿದ ಕೆಂಡದಂತಿದೆ.
11ನೇ ಪ್ರಮುಖ ಘಟನೆ : ಸುಶಾಂತ್ ಸಿಂಗ್ ರಜಪೂಜ್ ಸಾವು
ಕೊರೊನಾ ಹಿನ್ನಲ್ಲೆ ಸಿನಿಮಾ ಪ್ರದರ್ಶನ ಬಂದ್ ಮಾಡಲಾಗಿತ್ತು. ಈ ಮಧ್ಯೆ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದೇಶದಲ್ಲಿ ಸದ್ದು ಮಾಡ್ತು. ಮೀಡಿಯಾಗಳು ಕೊರೊನಾವನ್ನು ಮರೆಸುವಂತೆ ಈ ಪ್ರಕರಣವನ್ನ ಹೈಲೇಟ್ ಮಾಡಿದ್ವು. ಈ ಪ್ರಕರಣದಲ್ಲಿ ಹಲವರ ಬಂಧವಾಯ್ತು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
12ನೇ ಪ್ರಮುಖ ಘಟನೆ : ಭಾರತಕ್ಕೆ ರಫೇಲ್ ಆಗಮನ
ಚೀನಾ ಜೊತೆಗಿನ ಸಂಘರ್ಷದ ಮಧ್ಯೆ ಭಾರತಕ್ಕೆ ಜುಲೈ 27 ರಂದು ರಫೇಲ್ ಯುದ್ಧ ವಿಮಾನಗಳು ಆಗಮಿಸಿದವು. ಸೆಪ್ಟೆಂಬರ್ 10 ರಂದು ಇವು ಅಧಿಕೃತವಾಗಿ ವಾಯು ಸೇನೆ ಸೇರಿಕೊಂಡವು.
13ನೇ ಪ್ರಮುಖ ಘಟನೆ : ರಾಮಮಂದಿರದ ಶಿಲಾನ್ಯಾಸ
ಆಗಸ್ಟ್ 5 ರಂದು ಭಾರತೀಯರ ಐತಿಹಾಸಿಕ ಕನಸಾಗಿದ್ದ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಿತು. ಅಯೋಧ್ಯೆಯಲ್ಲಿ ಪ್ರಧಾನಿಗಳು ರಾಮಮಂದಿರದ ಶಿಲಾನ್ಯಾಸ ನೆರೆವೇರಿಸಿದರು.
14ನೇ ಪ್ರಮುಖ ಘಟನೆ : ಕೊರೊನಾ ಮಧ್ಯೆ ಬಿಹಾರ ಚುನಾವಣೆ
ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದರೂ ಪ್ರಜಾಪ್ರಭುತ್ವದ ಪ್ರಕ್ರಿಯೆ ನಿಲ್ಲಲಿಲ್ಲ. ಕೊರೊನಾ ನಡುವೆ ಬಿಹಾರ ವಿಧಾನಸಭಾ ಚುನಾವಣೆ ಯಶಸ್ವಿಯಾಗಿ ನಡೆಯಿತು. ಚುನಾವಣೆಯಲ್ಲಿ ಆರ್ ಜೆಡಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅಧಿಕಾರದಿಂದ ವಂಚಿತವಾಯ್ತು.
15 ಪ್ರಮುಖ ಘಟನೆ : ದುಬೈನಲ್ಲಿ ಐಪಿಎಲ್
ಕೊರೊನಾ ಕಾರಣದಿಂದಾಗಿ ಮುಂದೂಡುತ್ತ ಬಂದಿದ್ದ ಐಪಿಎಲ್ ಪಂದ್ಯಾವಳಿಗಳನ್ನು ಬಿಸಿಸಿಐ ರಿಸ್ಕ್ ತೆಗೆದುಕೊಂಡು ಯುಎಐನಲ್ಲಿ ಆಯೋಜನೆ ಮಾಡ್ತು. ಮುಂಬೈ ತಂಡ ಐದನೇ ಬಾರಿ ಕಪ್ ಎತ್ತಿ ಹಿಡಿಯಿತು. ಆರ್ ಸಿಬಿ ಪ್ಲೇ ಆಪ್ ಗೆ ಸುಸ್ತಾಯ್ತು.
16ನೇ ಪ್ರಮುಖ ಘಟನೆ : ಜಿಡಿಪಿ ಕುಸಿತ
ಕೊರೊನಾ, ಲಾಕ್ ಡೌನ್ ಪರಿಣಾಮ ಭಾರತದ ಜಿಡಿಪಿ ಪಾತಾಳಕ್ಕೆ ಕುಸಿಯಿತು. ಏಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕ ಜಿಡಿಪಿ ಮೈನಸ್ ಶೇ 23.9ರಷ್ಟು ಕುಸಿತಕಂಡಿತ್ತು. ಇದನ್ನ ವಿತ್ತ ಸಚಿವ ಆಕ್ಟ್ ಆಫ್ ಗಾಡ್ ಎಂದ್ರು. ಇದು ಭಾರಿ ಚರ್ಚೆಗೆ ಗ್ರಾಸವಾಯ್ತು.
17ನೇ ಪ್ರಮುಖ ಘಟನೆ : ಶೇರು ಮಾರುಕಟ್ಟೆ ದಾಖಲೆ
ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದ್ದರೂ ಷೇರು ಮಾರುಕಟ್ಟೆ ದಾಖಲೆ ಬರೆದಿದೆ. ಸೆನ್ಸಕ್ಸ್ 46,890 ಗಡಿ ತಲುಪಿದ್ರೆ, ನಿಫ್ಟಿ 13,740ಕ್ಕೆ ತಲುಪಿದೆ.
18ನೇ ಪ್ರಮುಖ ಘಟನೆ : ಹೊಸ ಸಂಸತ್ ಪೂಜೆ
ಕೊರೊನಾ ಸಂಕಷ್ಟ, ಆರ್ಥಿಕ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ಹೊಸ ಸಂಸತ್ ಭವನಕ್ಕೆ ಶಂಕು ಸ್ಥಾಪನೆ ಮಾಡಿದೆ. ಸುಮಾರು 900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಈ ಭವನ ನಿರ್ಮಾಣವಾಗಲಿದೆ.
19 ನೇ ಪ್ರಮುಖ ಘಟನೆ : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಭಾರತದಲ್ಲಿ ಮಾತ್ರ ಪೆಟ್ರೋಲ್ ಡಿಸೆಲ್ ಬೆಲೆ ಸತತವಾಗಿ ಏರಿಕೆ ಆಗುತ್ತಲೇ ಇದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಿಸೇಲ್ ಬೆಲೆ ಪೆಟ್ರೋಲ್ ಬೆಲೆಯನ್ನ ದಾಟಿತ್ತು.
20 ಪ್ರಮುಖ ಘಟನೆ : ದೆಹಲಿಯಲ್ಲಿ ರೈತರ ಪ್ರತಿಭಟನೆ
ಈ ವರ್ಷ ಕೇಂದ್ರದ ವಿರುದ್ಧ ಪ್ರತಿಭಟನೆಗಳೊಂದಿಗೆ ಆರಂಭವಾಗಿ ಪ್ರತಿಭಟನೆಗಳೊಂದಿಗೆ ಮುಕ್ತಯವಾಗಲಿದೆ. ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಗಡಿಯಲ್ಲಿ ಮೂರು ಕೃಷಿ ಮಸೂದೆಗಳನ್ನು ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ.
ಇವು 2020 ರ ಟಾಪ್ 20 ಪ್ರಮುಖ ಘಟನೆಗಳು.. ಈ ಹೊಸ ವರ್ಷ ನಿಮ್ಮಲ್ಲಿ ಹೊಸ ಹರ್ಷ ತರಲಿ.. ಹೊಸ ವರ್ಷದ ಶುಭಾಶಯಗಳು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel