ಪಕ್ಷಾಂತರಗೊಂಡ ರಾಜ್ಯದ 21 ಶಾಸಕರು
ನಾಗಾಲ್ಯಾಂಡ್: ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನ 21 ಶಾಸಕರು ಮುಖ್ಯಮಂತ್ರಿ ನೆಫಿಯು ರಿಯೊ ಅವರ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಗೆ ಸೇರ್ಪಡೆಗೊಂಡಿದ್ದಾರೆ.
ವಿಧಾನ ಸಭಾ ಚುನಾವಣೆಗೆ ಮುಂದಿನ ವರ್ಷ ಇರುವಾಗಲೇ ನಾಗಲ್ಯಾಂಡ್ ರಾಜ್ಯ ರಾಜಕಾರಣದಲ್ಲಿ ಮಹತ್ವ ಬೆಳವಣಿಗೆ ನಡೆದಿದೆ. ಶುಕ್ರವಾರ 21 ಎನ್‌ಪಿಎಫ್ ಶಾಸಕರ ಸೇರ್ಪಡೆಯೊಂದಿಗೆ 60 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಪಿಪಿ ಪಕ್ಷದ ಬಲ 42ಕ್ಕೇರಿದೆ.
ನಾಗಾಲ್ಯಾಂಡ್ ನಲ್ಲಿನ ರಾಜಕೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿಪಕ್ಷಗಳಿಲ್ಲದ ಸರ್ವಪಕ್ಷಗಳ ಸರ್ಕಾರವಾದ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (ಯುಡಿಎ) ರಚಿಸಲಾಗಿತ್ತು. ಎನ್‌ಪಿಎಫ್, ಎನ್‌ಡಿಪಿಪಿ ಮತ್ತು ಬಿಜೆಪಿಯನ್ನು ಒಳಗೊಂಡಿರುವ ಆಡಳಿತಾರೂಢ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.
ಮುಂಬರುವ ಚುನಾವಣೆಯಲ್ಲಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಸ್ವತಂತ್ರ್ಯವಾಗಿ ಸ್ಪರ್ಧಿಸುವುದಾಗಿ ಪಕ್ಷದ ಮುಖ್ಯಸ್ಥರು ಘೋಷಿಸಿದ್ದು ಪಕ್ಷದಲ್ಲಿನ ಭಿನ್ನಮತಕ್ಕೆ ಕಾರಣವಾಗಿತ್ತು. ಪ್ರಬಲವಾದ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷವು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಪಕ್ಷಾಂತರಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.