215 ವರ್ಷಗಳ ಹಿಂದೆ ಬ್ರಿಟೀಶ್ ಅಧಿಕಾರಿಯನ್ನು ಅತೀವವಾಗಿ ಆಕರ್ಷಿಸಿತ್ತು ಮಲೆನಾಡಿನ ಪುರಾತನ ವೀರಭದ್ರ ದೇವನ ಗುಡಿ:
ಬ್ರಿಟೀಷ್ ಅಧಿಕಾರಿ ಕೋಲಿನ್ ಮೆಕೆಂಜಿ ತನ್ನ ಹನ್ನೊಂದು ವರ್ಷಗಳ ಸುದೀರ್ಘ ಸಮೀಕ್ಷೆಯ ಅವಧಿಯಲ್ಲಿ ಹಲವಾರು ಬಾರಿ ಮಲೆನಾಡಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಾನೆ. ಅದರಲ್ಲೂ ವಿಶೇಷವಾಗಿ ಪ್ರಸಿದ್ಧ ದೇವಾಲಯಕ್ಕೆ ಭೇಟಿ ಕೊಟ್ಟಾಗ ಆ ದೇವಾಲಯಕ್ಕೆ ಸಂಬಂದಿಸಿದಂತೆ ರೇಖಾಚಿತ್ರಗಳು, ಚಿತ್ರಕಲೆ, ನಕ್ಷೆ ಮತ್ತು ಇತಿಹಾಸವನ್ನು ಸಂಗ್ರಹಿಸುವ ಹವ್ಯಾಸವನ್ನು ರೂಢಿ ಮಾಡಿಕೊಂಡಿದ್ದರು. ಒಮ್ಮೆ ಅಂದರೆ ದಿನಾಂಕ 23 ಮೇ 1805ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೇಟೆಯಲ್ಲಿ ಇರುವ ಪುರಾತನ “ಶ್ರೀ ವೀರಭದ್ರ ಸ್ವಾಮಿ” ದೇವಾಲಯಕ್ಕೆ ಭೇಟಿ ಕೊಟ್ಟಾಗ ಆ ದೇವಾಲಯದ ಗರ್ಭಗುಡಿಯ ಹೊರಗೋಡೆಯ ಮೇಲೆ ಕೆತ್ತಲಾದ ಚಿತ್ರಗಳು ಅವನನ್ನು ಆಕರ್ಷಿಸುತ್ತದೆ.
ತಕ್ಷಣ ತನ್ನ ಅಧೀನದಲ್ಲಿ ಇದ್ದ ಸರ್ವೇಯರ್ ಮೂಲಕ ದೇವಾಲಯದ ಯೋಜನೆಯ ಮಾಹಿತಿಯನ್ನು ಸಂಗ್ರಹಿಸುತ್ತಾನೆ ಮತ್ತು ಇನ್ನೊಂದು ಕಡೆ ಚಿತ್ರಕಾರರಿಂದ ದೇವಾಲಯದ ಶಿಲ್ಪಗಳ ಚಿತ್ರವನ್ನು ಬಿಡಿಸಿಕೊಂಡು ತಮ್ಮ ಸಂಗ್ರಹದಲ್ಲಿ ಅದನ್ನು ಜಮಾ ಮಾಡಿಕೊಳ್ಳುತ್ತಾನೆ. ಈ ರೀತಿ ನಮ್ಮ ಬಿದನೂರು ಸಂಸ್ಥಾನದ ಅಧೀನದಲ್ಲಿ ಇದ್ದ ಪಶ್ಚಿಮ ಘಟ್ಟದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಂಚರಿಸಿ ಸಂಗ್ರಹಿಸಿದ ಅಪಾರ ರೇಖಾಚಿತ್ರಗಳು, ಚಿತ್ರಕಲೆ, ನಕ್ಷೆ ಮತ್ತು ಇತಿಹಾಸದ ಗ್ರಂಥಗಳು (ಸರಿಸುಮಾರು 1700) ಇಂದು ದೂರದ ಲಂಡನ್ ಬ್ರಿಟೀಷ್ ಲೈಬ್ರರಿಯ ಖಜಾನೆಯಲ್ಲಿ ಭದ್ರವಾಗಿ ಕೂಡಿಡಲಾಗಿದೆ.
ನಿನ್ನೆ ನನ್ನ ಮಿತ್ರ ನಿತಿನ್ ಹೆರಳೆ ಮಧ್ಯಾಹ್ನ ಕರೆ ಮಾಡಿದಾಗ ಸಹಜವಾಗಿ ಎಲ್ಲಿರುವೇ ಅಂತ ಕೇಳಿದಾಗ ಅವನು ನೀಡಿದ ಉತ್ತರ ಇಂದು ಈ ಲೇಖನ ಬರೆಯಲು ಕಾರಣವಾಯಿತು. ನನ್ನ ಮಿತ್ರ ನಿತಿನ್ ನಾನು ಕೊಪ್ಪದ ಶ್ರೀ ವೀರಭದ್ರ ಸ್ವಾಮಿ ದೇವಾಲಯದ ಮುಂದೆ ಇರುವೆ ಎಂದಾಗ ನನ್ನ ಕಣ್ಣು ಮುಂದೆ ಬಂದು ನಿಂತ್ತಿದ್ದು ಕೋಲಿನ್ ಮೆಕೆಂಜಿ ತಾನು ಬಿದನೂರಿನ ಕೊಪ್ಪದ ಶ್ರೀ ವೀರಭದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದಾಗ ದಾಖಲಿಸಿದ ಅನಿಸಿಕೆಗಳು. ನಾನು ಕೂಡಲೇ ನನ್ನ ಮಿತ್ರನಿಗೆ ದೇವಾಲಯದ ಕೆಲವು ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದು ಕಳಿಸಲು ಹೇಳಿದೆ, ಇನ್ನೂ ಆ ಫೋಟೋಗಳನ್ನು ನಾನು ಲಂಡನ್ ಬ್ರಿಟಿಷ್ ಲೈಬ್ರರಿಯಲ್ಲಿ ಇರುವ ಮೆಕೆಂಜಿ ಕಲೆಕ್ಷನ್ ಇಂದ ತೆಗೆದುಕೊಂಡು ಬಂದ ಕೆಲವು ಚಿತ್ರಗಳ ಜೊತೆಗೆ ಹೋಲಿಸಿದಾಗ ಅದು ಇದೇ ಕೊಪ್ಪ ದೇವಾಲಯದ ಚಿತ್ರ ಎಂದು ಸಾಬೀತಾಗುತ್ತದೆ.
215 ವರ್ಷಗಳ ಹಿಂದೆ ಕೋಲಿನ ಮೆಕೆಂಜಿ ಶೃಂಗೇರಿ ಹೋಗುವ ದಾರಿ ಮಧ್ಯದಲ್ಲಿ ಇರುವ ಕೊಪ್ಪದ ಈ ದೇವಾಲಯಕ್ಕೆ ಭೇಟಿ ನೀಡುತ್ತಾನೆ. ಹೊಯ್ಸಳ ಆಳ್ವಿಕೆಯ ಮೊದಲ ಕಾಲಘಟ್ಟದಲ್ಲಿ ಕಟ್ಟಿದ ಈ ದೇವಾಲಯದ ಶೈಲಿ ಕೆಲವು ಕಡೆ ಹೊಯ್ಸಳ ಶೈಲಿಯನ್ನು ಹೋಲಿದರೆ ಮತ್ತೆ ಕೆಲವು ಕಡೆಗಳಲ್ಲಿ ವಿಭಿನ್ನವಾಗಿದೆ. ಪೂರ್ವಾಭಿಮುಖವಾಗಿ ಕಟ್ಟಿರುವ ಈ ದೇವಾಲಯದ ಗರ್ಭಗುಡಿಯ ಉತ್ತರ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಹೊರ ಗೋಡೆಯ ಮೇಲೆ ಕೆತ್ತಿರುವ ಶಿಲ್ಪಗಳು ಮತ್ತು ದೇವಾಲಯದ ವಿಮಾನ ಗೋಪುರದ ಚಿತ್ರಗಳನ್ನು ಮೆಕೆಂಜಿ ತನ್ನ ಸರ್ವೇ ಕಾರ್ಯದಲ್ಲಿ ದಾಖಲಿಸಿದ್ದು ಈ ದೇವಾಲಯ ಅಂದಿನ ಕಾಲದಲ್ಲಿ ಪ್ರಸಿದ್ಧಿ ಪಡೆದಿತ್ತು ಎಂದು ತೋರಿಸುತ್ತದೆ. ಈ ದಾಖಲೆಯಲ್ಲಿ ದೇವಾಲಯ ಇರುವ ಪ್ರದೇಶವನ್ನು “ಹಳೇ ಕೊಪ್ಪ” ಎಂದು ದಾಖಲಿಸಿದ್ದು ಇದು ಕೂಡ ವಿಶೇಷ ಸಂಗತಿ. ಇನ್ನೂ ಈ ದೇವಾಲಯದಲ್ಲಿ ಕಾಣಬಹುದಾದ ಪ್ರಮುಖ ಅಂಶ ಏನೆಂದರೆ ಈ ದೇವಾಲಯದಲ್ಲಿ ಇರುವ ಮೊದಲ ಜೈನ ತೀರ್ಥಂಕರರ ಶಿಲ್ಪ. ದೇವಾಲಯದ ಗರ್ಭಗುಡಿಯ ಪೂರ್ವದ ಹೊರ ಗೋಡೆಯ ಒಂದು ಮೂಲೆಯಲ್ಲಿ ಗಣಪತಿಯ ಶಿಲ್ಪ ಇದ್ದರೆ ಇನ್ನೊಂದು ಕಡೆ “ರಿಷಭನಾಥ” ತೀರ್ಥಂಕರರ ಶಿಲ್ಪ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಉಮಾಮಹೇಶ್ವರ, ಶ್ರೀರಾಮ, ವೀರಭದ್ರ, ಸುಬ್ರಮಣ್ಯ, ಗಣಪತಿಯ ಜೊತೆಗೆ ಜೈನರ ಮೊದಲ ತೀರ್ಥಂಕರರ ಶಿಲ್ಪ ಚಿತ್ರಗಳು ಈ ದೇವಾಲಯದ ಸಮಗ್ರ ಅಧ್ಯಯನಕ್ಕೆ ಸೂಕ್ತವಾಗಿದೆ. ರಿಷಭನಾಥ ಸ್ವಾಮಿಯ ಶಿಲ್ಪ ಕಯೊತ್ಸರ್ಗ (Kayotsarga) ಭಂಗಿಯಲ್ಲಿ ಇದ್ದು ಮೇಲ್ಬಾಗದಲ್ಲಿ ವೃಷಭನ ಶಿಲ್ಪ ಇದ್ದು, ಈ ಚಿತ್ರದಲ್ಲಿ ಇರುವುದು ಆದಿನಾಥ ಅಂದರೆ ರಿಷಭನಾಥರು ಎಂದು ಪುಷ್ಟಿಕರಿಸುತ್ತದೆ. ಮೆಕೆಂಜಿ ಬಂದು ಹೋದ ನಂತರ ಈ ದೇವಾಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದರೂ ಮೂಲ ಗರ್ಭಗುಡಿಯು ಯಥಾವತ್ತಾಗಿ ಇರುವುದು ಖುಷಿಯ ವಿಷಯ.
ಕೋಲಿನ ಮೆಕೆಂಜಿಯ ಪರಿಚಯ:-
1799ರಲ್ಲಿ ನಾಲ್ಕನೇ ಆಂಗ್ಲ ಮೈಸೂರು ಯುದ್ಧದ ಸಮಾಪ್ತಿಯ ನಂತರ ಬ್ರಿಟಿಷ್ ಸರ್ಕಾರ ತನ್ನ ಮಡಿಲಿಗೆ ಬಂದಿರುವ ಹೊಸ ಪ್ರದೇಶವನ್ನು (ಹಳೆ ಮೈಸೂರು, ಇಕ್ಕೇರಿ ನಾಯಕರ ಮಲೆನಾಡು ಮತ್ತು ಕರಾವಳಿ ಹಾಗೂ ಚಿತ್ರದುರ್ಗ) ಸಮರ್ಥವಾಗಿ ಆಳ್ವಿಕೆ ಮಾಡಲು ಕೆಲವು ಹೊಸ ಪ್ರಯೋಗಕ್ಕೆ ಮುಂದಾಗುತ್ತದೆ. ಈ ಹೊಸ ಪ್ರದೇಶವನ್ನು ರಾಜಕೀಯ ಮತ್ತು ಸೈನ್ಯದ ದೃಷ್ಟಿಕೋನದಿಂದ ಅರತಿಕೊಳ್ಳಲು ಒಂದು ಸಂಕ್ಷಿಪ್ತವಾದ ಸಮೀಕ್ಷೆ ಮಾಡಲು ನಿರ್ಧರಿಸುತ್ತದೆ. ಈ ಸಮೀಕ್ಷೆಯನ್ನು ಕೈಗೊಳ್ಳಲು ಬ್ರಿಟಿಷ್ ಅಧಿಕಾರಿಗಳಾದ ಕೋಲಿನ್ ಮೆಕೆಂಜಿ (Colin Mackenzie) ಮತ್ತು ಫ್ರಾನ್ಸಿಸ್ ಬುಕಾನನ್ (Francis Buchanan) ಅವರನ್ನು ಬ್ರಿಟಿಷ್ ಸರ್ಕಾರ ನೇಮಿಸುತ್ತದೆ. ಫ್ರಾನ್ಸಿಸ್ ಬುಕಾನನ್ 1800 ಇಂದ 1801ರ ವರೆಗೂ ಮೈಸೂರು, ಕೆನರಾ ಮತ್ತು ಮಲಬಾರ್ ಪ್ರದೇಶದಲ್ಲಿ ತಿರುಗಾಡಿ ಸ್ಥಳೀಯ ಕೃಷಿ ಚಟುವಟಿಕೆಗಳು, ಮಾರುಕಟ್ಟೆ, ಕಾರ್ಖಾನೆ, ಖನಿಜಗಳು, ಬೆಳೆಗಳು, ಪರಿಸರ, ಹವಾಮಾನ ಹೀಗೆ ಹಲವಾರು ವಿಷಯಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ಸಂಗ್ರಹಿಸಿ ತಮ್ಮ ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕೆ ನೀಡುತ್ತಾರೆ.
ಅದೇ ರೀತಿ ಕೋಲಿನ್ ಮೆಕೆಂಜಿ ಅವರಿಗೆ ಮಿಲಿಟರಿ ದೃಷ್ಟಿಕೋನದಿಂದ ಮೈಸೂರು, ಮಲಬಾರ್ ಮತ್ತು ಕೆನರಾ ಪ್ರದೇಶದ ಪ್ರಮುಖ ನಗರ, ಊರು ಮತ್ತು ಸ್ಥಳದ ನಕ್ಷೆಯನ್ನು ತಯಾರಿಸುವ ಜವಾಬ್ದಾರಿಯನ್ನು ಬ್ರಿಟಿಷ್ ಸರ್ಕಾರ ಅವರ ಹೆಗಲ ಮೇಲೆ ಹೊರಿಸುತ್ತದೆ. ಮೆಕೆಂಜಿ ಪ್ರಮುಖ ಸ್ಥಳಗಳ ನಕ್ಷೆ ತಯಾರಿಕೆಗೆ ಸೀಮಿತವಾಗದೆ ತನ್ನ ಸುದೀರ್ಘ ಸಮೀಕ್ಷೆಯ ಅವದಿಯಲ್ಲಿ ಅಂದರೆ 1799 ಇಂದ 1810ರ ವರೆಗೂ ಮಲೆನಾಡು, ಹಳೆ ಮೈಸೂರು, ಮಲಬಾರ್ ಮತ್ತು ಕೆನರಾ ಪ್ರಾಂತ್ಯದಲ್ಲಿ ಸಂಚರಿಸಿ ನಮ್ಮ ಪರಂಪರೆ ಹಾಗೂ ನಿಜವಾದ ಸಂಪತ್ತುಗಳಾಗಿದ್ದ ಕಡತಗಳು, ದಾಖಲೆ, ಶಿಲ್ಪಗಳು, ತಾಮ್ರ ಶಾಸನ ಮತ್ತು ಹಲವಾರು ಅಮೂಲ್ಯ ಗ್ರಂಥಗಳನ್ನು ಶೇಖರಿಸಿ ಅದನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳುತ್ತಾನೆ. ಮೆಕೆಂಜಿ ಹಲವಾರು ಸ್ಥಳೀಯ ಮತ್ತು ಆಂಗ್ಲ ಚಿತ್ರಕಾರರ ಸಹಾಯದಿಂದ ನಮ್ಮ ಜನರ ವೇಷಭೂಷಣ, ಪ್ರಮುಖ ದೇವಸ್ಥಾನ, ಕೋಟೆ, ಪೇಟೆ ಮತ್ತು ಪಶ್ಚಿಮ ಘಟ್ಟದ ಪರಿಸರವನ್ನು ಸೆರೆಹಿಡಿದುಕೊಂಡಿದ್ದ. ಮೆಕೆಂಜಿ ಸಮೀಕ್ಷೆ ಮುಗಿದ ನಂತರ ನಕ್ಷೆಗಳನ್ನು ಸರ್ಕಾರಕ್ಕೆ ಒಪ್ಪಿಸಿ ತಾನು ಸಂಗ್ರಹಿಸಿದ ಸಹಸ್ರಾರು ಸಂಖ್ಯೆಯ ಅಮೂಲ್ಯ ಸಂಪತ್ತಿನ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಹೊರತರಲು ಅವನ ಸಹಾಯ ಮಾಡಲು ಸ್ಥಳೀಯ ದಸ್ತಾವೇಜು ಲೇಖಕ, ಅನುವಾದಕರು ಮತ್ತು ಸರ್ವೇಯರ್ ಗಳನ್ನು ನೇಮಿಸಿಕೊಳ್ಳುತ್ತಾನೆ. ಆದರೆ ಮೆಕೆಂಜಿ ಮದ್ರಾಸ್ ಪ್ರೆಸಿಡೆನ್ಸಿಯ ಮೊದಲ ಸರ್ವೇಯರ್ ಜನರಲ್ ಆಗಿ ತದನಂತರ ಬ್ರಿಟಿಷ್ ಸರ್ಕಾರದ ಭಾರತದ ಮೊದಲ ಸರ್ವೇಯರ್ ಜನರಲ್ ಆಗಿ ನೇಮಕಗೊಂಡ ಮೇಲೆ ತಮ್ಮ ಆಸೆಯನ್ನು ನನಸು ಮಾಡಲು ಸಮಯಾವಕಾಶದ ಅಭಾವ ಕಂಡುಬರುತ್ತದೆ.
ಕೊನೆಗೆ 8ನೇ ಮೇ 1821ರಲ್ಲಿ ಮೆಕೆಂಜಿ ತನ್ನ ಅಪಾರ ಜ್ಞಾನ ಸಂಪತ್ತನ್ನು ತನ್ನ ಹೆಂಡತಿಗೆ ಬಿಟ್ಟು ಸಾಯುತ್ತಾನೆ. 1822ರಲ್ಲಿ ಮೆಕೆಂಜಿಯ ಮಡದಿ ಅವನ ಅಪಾರ ಜ್ಞಾನ ಭಂಡಾರವನ್ನು ಬ್ರಿಟಿಷ್ ಸರ್ಕಾರಕ್ಕೆ ಮಾರುತ್ತಾಳೆ. ಇಂದು ಲಂಡನ್ ನಲ್ಲಿ ಇರುವ ಬ್ರಿಟಿಷ್ ಲೈಬ್ರರಿಯಲ್ಲಿ ಮೆಕೆಂಜಿ ಕಲೆಕ್ಷನ್ ನಲ್ಲಿ ಭಾರತ ದೇಶದ ಅದರಲ್ಲೂ ವಿಶೇಷವಾಗಿ ನಮ್ಮ ಮಲೆನಾಡಿನ ಅಸಂಖ್ಯಾತ ಜ್ಞಾನ ಭಂಡಾರ ಅನಾಥವಾಗಿ ಬಿದ್ದಿರುವುದು ನಿಜಕ್ಕೂ ಬೇಸರದ ಸಂಗತಿ. ನಾನು ಮತ್ತು ನನ್ನ ಮಿತ್ರ ನಿಧಿನ್ ಜಾರ್ಜ್ ಓಲಿಕಾರ, ಹಲವಾರು ವರ್ಷಗಳಿಂದ ಮೆಕೆಂಜಿ ಕಲೆಕ್ಷನಲ್ಲಿ ಇರುವ ನಕ್ಷೆ, ಚಿತ್ರ ಮತ್ತು ಇತರೆ ಮಾಹಿತಿಯನ್ನು ಸಂಗ್ರಹಿಸಲು ಹರಸಾಹಸ ಪಡುತ್ತಿದ್ದು ಇತ್ತೀಚಿಗೆ ನಗರ (ಬಿದನೂರು), ಅನಂತಪುರ, ಶಿಕಾರಿಪುರ, ಶಿವಮೊಗ್ಗ ಮತ್ತು ಹೊನ್ನಾಳಿಯ ನಕ್ಷೆ ನಮ್ಮ ಕೈ ಸೇರಿದೆ. ಅದೇ ರೀತಿ ನಮ್ಮ ಮಲೆನಾಡಿನ ಇನ್ನೂ ಹಲವಾರು ದೇವಾಲಯಗಳು ಮತ್ತು ಪ್ರದೇಶಗಳ ಚಿತ್ರವು ಕೈ ಸೇರಿದೆ.
ನಾನು ಮತ್ತು ನನ್ನ ಮಿತ್ರ ಪ್ರದೀಪ್ ಹೆಚ್ ಜಿ ಆದಷ್ಟೂ ಬೇಗನೆ ಕೊಪ್ಪದ ಶ್ರೀ ವೀರಭದ್ರ ಸ್ವಾಮಿ ದೇವಾಲಯದ ಕ್ಷೇತ್ರ ಕಾರ್ಯಚರಣೆ ನಡೆಸಿ ಇದರ ಸಂಪೂರ್ಣ ಇತಿಹಾಸವನ್ನು ತಮ್ಮೆಲ್ಲರ ಮುಂದೆ ಇಡಲು ಇಚ್ಛಿಸುತ್ತೇವೆ. ಸದ್ಯಕ್ಕೆ ಈ ದೇವಾಲಯ ಕರ್ನಾಟಕ ರಾಜ್ಯದ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧೀನದಲ್ಲಿ ಇದ್ದು ಇಲ್ಲಿ ವೀರಶೈವ ಪರಂಪರೆಯಲ್ಲಿ ದಿನನಿತ್ಯದ ಪೂಜೆ ನಡೆದುಕೊಂಡು ಹೋಗುತ್ತಿದೆ. ಈ ದೇವಾಲಯ ಇಕ್ಕೇರಿ ನಾಯಕರಿಗೂ ಮಹತ್ವದ್ದಾಗಿದ್ದು ಇದರ ಬಗ್ಗೆಯೂ ಮಾಹಿತಿಯನ್ನು ನೀಡಲಾಗುವುದು.
ಆಕರ: ಕೋಲಿನ್ ಮೆಕೆಂಜಿ ಸಂಗ್ರಹ
ಲೇಖಕರು:- ಅಜಯ್ ಕುಮಾರ್ ಶರ್ಮಾ, ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹಾಗೂ ವನ್ಯಜೀವಿ ಹೋರಾಟಗಾರರು