ಹೊಸದಿಲ್ಲಿ: ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ತಮ್ಮ ತವರೂರುಗಳಿಗೆ ತೆರಳುವ ಯತ್ನದಲ್ಲಿ ಕನಿಷ್ಠ 22 ಮಂದಿ ವಲಸಿಗ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು thewire.in ವರದಿ ತಿಳಿಸಿದೆ. ಮೃತಪಟ್ಟವರಲ್ಲಿ ಐದು ಮಂದಿ ಮಕ್ಕಳೂ ಸೇರಿದ್ದಾರೆ. ಇದರ ಹೊರತಾಗಿ ಬಿಹಾರದಲ್ಲಿ ಮಾರ್ಚ್ 27ರಂದು ಸ್ವಂತ ಊರಿನತ್ತ ತೆರಳುತ್ತಿದ್ದ ಹನ್ನೊಂದು ವರ್ಷದ ಬಾಲಕನೊಬ್ಬ ಹಸಿವಿನಿಂದ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
ಉಳಿದಂತೆ ಮಾರ್ಚ್ 28 ರಂದು 39 ವರ್ಷದ ವ್ಯಕ್ತಿಯೊಬ್ಬ ಮಧ್ಯ ಪ್ರದೇಶದ ಮೊರೆನಾ ಎಂಬಲ್ಲಿಗೆ ತೆರಳುತ್ತಿರುವ ಹಾದಿಯಲ್ಲಿ ಅತೀವ ಸುಸ್ತಿನಿಂದ ಮೃತಪಟ್ಟಿದ್ದಾನೆ.
ಮಾರ್ಚ್ 29ರಂದು ಹರಿಯಾಣದಲ್ಲಿ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಕಾರ್ಮಿಕ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.
ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ತಮ್ಮ ಊರಿಗೆ ಮರಳುತ್ತಿದ್ದ ವಲಸಿಗ ಕಾರ್ಮಿಕರ ಗುಂಪಿನಲ್ಲಿದ್ದ ಎಂಟು ಮಂದಿ ತೆಲಂಗಾಣದಲ್ಲಿ ಮಾರ್ಚ್ 27ರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಾರ್ಚ್ 28ರಂದು ಸೂರತ್ ನ ಆಸ್ಪತ್ರೆಯಿಂದ ಮನೆಗೆ ಹೋಗಲು ಯಾವುದೇ ವಾಹನ ಲಭ್ಯವಿಲ್ಲದೆ 62 ವರ್ಷದ ವ್ಯಕ್ತಿಯೊಬ್ಬ ಎಂಟು ಕಿ.ಮೀ. ದೂರ ನಡೆದು ಸುಸ್ತಿನಿಂದ ಸಾವನ್ನಪ್ಪಿದ್ದಾನೆ ಎಂದು thewire.in ವರದಿ ತಿಳಿಸಿದೆ.
ಹೀಗೆ ಲಾಕ್ ಡೌನ್ ನಿಂದಾಗಿ ಇದುವರೆಗೂ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದ 22 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.








