Vijayapura : ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು..
ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವಿಗೀಡಾಗಿರುವ ಘಟನೆ ಮುದ್ದೆಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ಬೆಳಗಿನ ಜಾವ ನಡೆದಿದೆ. ಕುಂಟೋಜಿ ಗ್ರಾಮದಲ್ಲಿ ಮನೆಯ ಪಕ್ಕದಲ್ಲೇ ಹೊಂದಿಕೊಂಡಿರುವ ಹೊಲದಲ್ಲಿ ಕೆಲಸ ಮಾಡಿ ಬಂದು ಮಲಗಿದ್ದಾಗ ಬೆಳಗಿನಜಾವ ವಿಷಕಾರಿ ಹಾವು ಕಚ್ಚಿದೆ ಎನ್ನಲಾಗಿದೆ.
ತೀವ್ರ ಅಸ್ವಸ್ಥಳಾದ ನಾಲ್ಕು ತಿಂಗಳ ಗರ್ಭಿಣಿ ನಿರ್ಮಲಾ ಯಲ್ಲಪ್ಪ ಚಲವಾದಿ(25 ) ಮೃತಪಟ್ಟಿದ್ದಾರೆ. ಹಾವು ಕಚ್ಚಿರುವುದು ಗೊತ್ತಾದ ತಕ್ಷಣ ಗರ್ಭಿಣಿಯನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಎಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಾವು ಕಚ್ಚಿ ಗರ್ಭಿಣಿ ಮೃತಪಟ್ಟ ವಿಷಯ ತಿಳಿದು ಅವರ ಮನೆಗೆ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಗ್ರಾಮ ಲೆಕ್ಕಾಧಿಕಾರಿ ಅನುಪಮಾ ಪೂಜಾರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಕಂದಾಯ ನಿರೀಕ್ಷಕರು ಹೇಳಿದ್ದಾರೆ.
25-year-old pregnant woman died by snake bite in Vijayapura








