ದ.ಕ. ಕೊರೊನಾಗೆ 10 ನೇ ಬಲಿ – ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 2ನೇ ಕೊರೋನಾ ಪ್ರಕರಣ ಪತ್ತೆ
ಪುತ್ತೂರು, ಜೂನ್ 24: ಪುತ್ತೂರಿನಲ್ಲಿರುವ ಪತ್ನಿಯ ಮನೆಗೆ ಬಂದಿದ್ದ ಕಲ್ಲಂದಡ್ಕ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪ್ರಕರಣವು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ದಾಖಲಾಗಿರುವ 2ನೇ ಪ್ರಕರಣವಾಗಿದ್ದು, ಆತಂಕ ಹೆಚ್ಚಾಗಿದೆ.
42 ವರ್ಷ ಪ್ರಾಯದ ಪೈಂಟರ್, ಪುತ್ತೂರಿನ ಬನ್ನೂರಿನಲ್ಲಿರುವ ಚೆಲುವಮ್ಮನ ಕಟ್ಟೆ ಬಳಿಯ ಪತ್ನಿಯ ತವರು ಮನೆಗೆ ಬಂದಿದ್ದರು. ಜ್ವರ, ಶೀತ ಬಾಧೆಯಿಂದ ಅವರು ಬಳಲುತ್ತಿದ್ದ ಕಾರಣ ಎರಡು ದಿನಗಳ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು ಮಂಗಳೂರು ಕೊರೊನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವ್ಯಕ್ತಿಯ ಪತ್ನಿ ಮತ್ತು 10 ದಿನದ ಮಗುವನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 57 ವರ್ಷದ ಉಳ್ಳಾಲದ ಮಹಿಳೆ ಬಲಿಯಾಗಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿದೆ.
ಅನಾರೋಗ್ಯದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, 8 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಆ ಸಮಯದಲ್ಲಿ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಗಂಟಲ ದ್ರವ ಪರೀಕ್ಷಾ ವರದಿ ಅವರಿಗೆ ಕೊರೋನಾ ಸೋಂಕು ತಗುಲಿರುವುದನ್ನು ದೃಢಪಡಿಸಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ