ಎರಡನೇ ಮಹಿಳಾ ಟಿ-ಟ್ವೆಂಟಿ – ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು
ಭಾರತ ಮಹಿಳಾ ಕ್ರಿಕೆಟ್ ತಂಡ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ದ ಎಂಟು ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಭಾರತ ಮಹಿಳಾ ತಂಡ 1-1ರಿಂದ ಸಮಬಲ ಸಾಧಿಸಿದೆ. ಇದರೊಂದಿಗೆ ಮೂರನೇ ಪಂದ್ಯ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು
ಭಾರತದ ಪರ ಸ್ಮøತಿ ಮಂದಾನ (20 ರನ್ ) ಹಾಗೂ ಶಫಾಲಿ ವರ್ಮಾ (48 ರನ್ ) ಅವರು ಮೊದಲ ವಿಕೆಟ್ ಗೆ 8.5 ಓವರ್ ಗಳಲ್ಲಿ 70 ರನ್ ಕಲೆ ಹಾಕಿದ್ದರು. ನಂತರ ಹರ್ಮನ್ ಪ್ರೀತ್ ಕೌರ್ 31 ರನ್ , ದೀಪ್ತಿ ಶರ್ಮಾ ಅಜೇಯ 24ರನ್, ಹಾಗೂ ರಿಚಾ ಘೋಷ್ 8 ರನ್ ಮತ್ತು ಸ್ನೇಹಾ ರಾಣಾ ಅಜೇಯ 8 ರನ್ ದಾಖಲಿಸಿದ್ರು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಯ್ತು. ಇಂಗ್ಲೆಂಡ್ ನ ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮೌಂಟ್ ಆಕರ್ಷಕ 59 ರನ್ ಗಳಿಸಿದ್ರು. ಇನ್ನುಳಿದಂತೆ ನಾಯಕಿ ಹಿಥರ್ ನೈಟ್ 30 ರನ್ ಹಾಗೂ ಆಮಿ ಎಲೆನ್ ಜೋನ್ಸ್ 11 ರನ್ ಗಳಿಸಿದ್ರು. ಇನ್ನುಳಿದ ಆಟಗಾರ್ತಿಯರು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು. ಭಾರತದ ಪರ ಪೂನಮ್ ಯಾದವ್ ಎರಡು ವಿಕೆಟ್ ಪಡೆದ್ರೆ, ದೀಪ್ತಿ ಶರ್ಮಾ ಮತ್ತು ಆರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದ್ರು. ಈ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಅದ್ಭುತವಾಗಿ ಫೀಲ್ಡಿಂಗ್ ಮಾಡಿದ್ದರು. ಅಲ್ಲದೆ ನಾಲ್ಕು ರನೌಟ್ ಗಳನ್ನು ಮಾಡಿದ್ದರು. ದೀಪ್ತಿ ಶರ್ಮಾ ಮತ್ತು ರೀಚಾ ಘೊಷ್ ಮಿಂಚಿನ ಫೀಲ್ಡಿಂಗ್ ಮೂಲಕ ಗಮನ ಸೆಳೆದ್ರು. ಅಲ್ಲದೆ ಪಂದ್ಯದ ಗತಿಯನ್ನು ಕೂಡ ಬದಲಾಯಿಸಿದ್ದರು. ಜೊತೆಗೆ ದೀಪ್ತಿ ಶರ್ಮಾ ಮತ್ತು ಸ್ನೇಹಾ ರಾಣಾ ಅವರು ಅದ್ಭುತ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡದ ರನ್ ಗತಿಗೆ ಕಡಿವಾಣ ಹಾಕಿದ್ದರು.