ಇಂಗ್ಲೆಂಡ್ -ವಿಂಡೀಸ್ 2ನೇ ಟೆಸ್ಟ್- ಅಂತಿಮ ದಿನ ನಡೆಯುತ್ತಾ ನಾಟಕೀಯ ತಿರುವು…!
ಮ್ಯಾಂಚೆಸ್ಟ್‍ರ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಅಂತಿಮ ದಿನ ನಾಟಕೀಯ ತಿರುವು ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇಂಗ್ಲೆಂಡ್ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ರೆ, ವೆಸ್ಟ್ ಇಂಡೀಸ್ ತಂಡ ಪಂದ್ಯವನ್ನು ಹೇಗಾದ್ರೂ ಮಾಡಿ ಡ್ರಾ ಮಾಡಿಕೊಳ್ಳಲು ಹರಸಾಹಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪಂದ್ಯದ 4 ನೇ ದಿನ ವೆಸ್ಟ್ ಇಂಡೀಸ್ ತಂಡಕ್ಕೆ ಕಾಟ ಕೊಟ್ಟಿದ್ದು ವೇಗಿಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್. ಇವರ ಮಧ್ಯೆ ಸ್ಯಾಮ್ ಕುರನ್ ಕೂಡ ವಿಂಡೀಸ್‍ಗೆ ಮಾರಕವಾಗಿ ಕಾಡಿದ್ರು. ಪರಿಣಾಮ ವೆಸ್ಟ್ ಇಂಡೀಸ್ ತಂಡ ತನ್ನ ಮೊದಲ ಇನಿಂಗ್ಸ್ ಗೆ 287 ರನ್‍ಗಳಿಗೆ ಆಲೌಟ್ ಆಯ್ತು.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ಕಳೆದುಕೊಂಡು 469 ರನ್‍ಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 182 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 4 ನೇ ದಿನದ ಅಂತ್ಯಕ್ಕೆ 37 ರನ್‍ಗೆ ಎರಡು ವಿಕೆಟ್ ಕಳೆದುಕೊಂಡಿದೆ. ಒಟ್ಟಾರೆ ಇಂಗ್ಲೆಂಡ್ ತಂಡ 219 ರನ್‍ಗಳ ಮುನ್ನಡೆ ಪಡೆದುಕೊಂಡಿದೆ.
ಒಂದು ಹಂತದಲ್ಲಿ 242 ರನ್‍ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ನಾಟಕೀಯ ಕುಸಿತ ಕಂಡಿತ್ತು. ಮೊದಲ ಟೆಸ್ಟ್ ಪಂದ್ಯದ ಹೀರೋ ಜೆರ್ಮೆನ್ ಬ್ಲ್ಯಾಕ್ ವುಡ್ ಶೂನ್ಯ ಸುತ್ತಿದ್ದ ನಂತರ 45 ರನ್‍ಗಳ ಅಂತರದಲ್ಲಿ ವೆಸ್ಟ್ ಇಂಡೀಸ್ ಕೊನೆಯ ಐದು ವಿಕೆಟ್‍ಗಳು ಪತನಗೊಂಡವು.
ಇದಕ್ಕು ಮೊದಲು ಆರಂಭಿಕ ಕ್ರೇಗ್ ಬ್ರಾತ್‍ವೇಟ್ (75), ಶಾಮ್ರಾಹ್ ಬ್ರೂಕ್ಸ್ (68), ರೋಸ್ಟನ್ ಚೇಸ್ (51) ಆಕರ್ಷಕ ಅರ್ಧಶತಕ ದಾಖಲಿಸಿ ಇಂಗ್ಲೆಂಡ್ ಬೌಲರ್‍ಗಳಿಗೆ ಸವಾಲಾಗಿ ಪರಿಣಮಿಸಿದ್ದರು. ಆದ್ರೆ ವೆಸ್ಟ್ ಇಂಡೀಸ್‍ನ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್‍ಗಳು ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯುವ ಮನಸ್ಸು ಮಾಡಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‍ನ ಬೃಹತ್ ಮೊತ್ತಕ್ಕೆ ದಿಟ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ.
ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡಕ್ಕೆ ವೆಸ್ಟ್ ಇಂಡೀಸ್ ವೇಗಿಗಳು ಆಘಾತ ನೀಡಿದ್ರು. ಪಂದ್ಯದ ರಣ ತಂತ್ರವನ್ನು ಬದಲಿಸಿದ್ದ ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ಅವರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿತ್ತು.
ಆದ್ರೆ ಜೋಸ್ ಬಟ್ಲರ್ ಶೂನ್ಯ ಸುತ್ತಿದ್ರೆ, ಮೊದಲ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಝಾಕ್ ಕ್ರಾವ್ಲೇ ಅವರು 11 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಬೆನ್ ಸ್ಟೋಕ್ಸ್ ಅಜೇಯ 16 ಹಾಗೂ ನಾಯಕ ಜಾಯ್ ರೂಟ್ ಅಜೇಯ 8 ರನ್‍ಗಳೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒಟ್ಟಿನಲ್ಲಿ ಅಂತಿಮ ದಿನದ ಆಟ ಏನು ಆಗುತ್ತೋ ಎಂಬುದನ್ನು ಕಾದು ನೋಡಬೇಕು.








