ಇಂಗ್ಲೆಂಡ್ -ವಿಂಡೀಸ್ 2ನೇ ಟೆಸ್ಟ್ – ಡಾಮಿನಿಕ್ ಸಿಬ್ಲೇಯ್ – ಬೆನ್ ಸ್ಟೋಕ್ಸ್ ಅಜೇಯ ಅರ್ಧಶತಕ
ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 207 ರನ್ ದಾಖಲಿಸಿದೆ. ಆರಂಭಿಕ ಡಾಮಿನಿಕ್ ಸಿಬ್ಲೇಯ್ ಮತ್ತು ಬೆನ್ ಸ್ಟೋಕ್ಸ್ ಅವರು ಅಜೇಯ ಅರ್ಧಶತಕ ಸಿಡಿಸಿ ವಿಂಡೀಸ್ ತಂಡಕ್ಕೆ ಸವಾಲಾಗಿ ಪರಿಣಮಿಸಿದ್ರು.
ಟಾಸ್ ಸೋತ್ರೂ ಮೊದಲು ಇಂಗ್ಲೆಂಡ್‍ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಕೆರೆಬಿಯನ್ನರ ಲೆಕ್ಕಚಾರದಂತೆ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ರೋರಿ ಬನ್ರ್ಸ್ ಅವರು 15 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಇನ್ನೊಂದೆಡೆ ಝಾಕ್ ಕ್ರಾವ್ಲೇಯ್ ಶೂನ್ಯ ಸುತ್ತಿದ್ರು. ಹಾಗೇ ನಾಯಕ ಜಾಯ್ ರೂಟ್ ಅವರು 23 ರನ್‍ಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದ್ರು.
ಬಳಿಕ ಡಾಮಿನಿಕ್ ಸಿಬ್ಲೇಯ್ ಅವರನ್ನು ಜೊತೆ ಸೇರಿದ ಬೆನ್ ಸ್ಟೋಕ್ಸ್ ನಾಲ್ಕನೇ ವಿಕೆಟ್ ಅಜೇಯ 126 ರನ್‍ಗಳ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು. ಡಾಮಿನಿಕ್ ಸಿಬ್ಲೇಯ್ ಅಜೇಯ 86 ರನ್ ಗಳಿಸಿ ಶತಕದತ್ತ ದಾಪುಗಾಲು ಹಾಕಿದ್ದಾರೆ. ಮತ್ತೊಂದೆಡೆ ತಾಳ್ಮೆಯಿಂದಲೇ ಆಡಿದ್ದ ಬೆನ್ ಸ್ಟೋಕ್ಸ್ ಅಜೇಯ 59 ರನ್ ದಾಖಲಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ರೋಸ್ಟನ್ ಚೇಸ್ ಎರಡು ವಿಕೆಟ್ ಉರುಳಿಸಿದ್ರೆ, ಅಲ್ಝಾರಿ ಜೋಸೆಫ್ ಒಂದು ವಿಕೆಟ್ ಕಬಳಿಸಿದ್ರು. ಈ ನಡುವೆ ಇಂಗ್ಲೆಂಡ್‍ನ ವೇಗಿ ಜೋಫ್ರಾ ಆರ್ಚರ್ ಅವರು ಕೋವಿಡ್-19 ಶಿಷ್ಟಾಚಾರ ಉಲ್ಲಂಘಿಸಿದ್ದ ಕಾರಣ ಈ ಪಂದ್ಯದಿಂದ ಹೊರಬಿದ್ದಿದ್ದಾರೆ.