ಶ್ರೀನಗರ: ಕಳೆದ ಮೇ ತಿಂಗಳ ೨೦ರಂದು ರಂಜಾನ್ ಪ್ರಾರ್ಥನೆ ವೇಳೆ ಭದ್ರತೆಗೆ ನಿಯೋಜಿತರಾಗಿದ್ದ ಇಬ್ಬರು ಬಿಎಸ್ಎಫ್ ಯೋಧರನ್ನು ಕೊಂದಿದ್ದ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಝಡಿಬಾಳ್ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಮಟಾಶ್ ಮಾಡಿದ್ದಾರೆ.
ಉಗ್ರರ ಹತ್ಯೆಗೂ ಮುನ್ನ ಅವರ ಪೋಷಕರನ್ನು ಸ್ಥಳಕ್ಕೆ ಕರೆಸಿದ ಪೊಲೀಸರು, ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ, ಉಗ್ರರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಯಿತು ಎಂದು ಐಜಿಪಿ ವಿಜಯ್ಕುಮಾರ್ ತಿಳಿಸಿದ್ದಾರೆ.
ಈ ಮೂವರು ಉಗ್ರರು ೨೦೧೯ರಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಈ ಮೂವರಲ್ಲಿ ಒಬ್ಬ, ಇಬ್ಬರು ಬಿಎಸ್ಎಫ್ ಯೋಧರ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದ. ಕಳೆದ ಮೇ ತಿಂಗಳಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕನ ಪುತ್ರ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಮೇ.೧೯ರಂದು ನಡೆದಿದ್ದ ೧೨ ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಸ್ಪೋಟಗಳ ಸಿಡಿತದಿಂದ ೧೨ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.








