30 ವರ್ಷದ ಹಿಂದಿನ ಶತಕ… ಶಾಂಪೇನ್ ಬಾಟಲ್ ಮತ್ತು ಬಿಳಿ ಶರ್ಟಿನ ಕಥೆ…!
ಆಗಸ್ಟ್ 14, 1990.. ಅಂದ್ರೆ ಸರಿಯಾಗಿ ಇಂದಿಗೆ 30 ವರ್ಷಗಳ ಹಿಂದೆ.. ಸಚಿನ್ ತೆಂಡುಲ್ಕರ್ ಮಾಸ್ಟರ್ ಬ್ಲ್ಯಾಸ್ಟರ್ ಆಗಿರಲಿಲ್ಲ. ಕ್ರಿಕೆಟ್ ದೇವ್ರು ಆಗಿರಲಿಲ್ಲ. ದಾಖಲೆಗಳ ಸರದಾರನೂ ಆಗಿರಲಿಲ್ಲ. ಬದಲಾಗಿ ಅವಕಾಶಗಳ ಮೇಲೆ ಅವಕಾಶ ಸಿಕ್ಕಿದ್ರೂ ದೊಡ್ಡ ಮಟ್ಟದ ಯಶ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದ್ರೂ ಭಾರತ ಕ್ರಿಕೆಟ್ ತಂಡದ ಖಾಯಂ ಆಟಗಾರ. ಯಾಕಂದ್ರೆ ಸಚಿನ್ ಪ್ರತಿಭೆಯ ಮೇಲೆ ಅಪಾರ ನಂಬಿಕೆ ಇತ್ತು.. ಭರವಸೆ ಇತ್ತು. ಮುಂದೊಂದು ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸುತ್ತಾನೆ ಅನ್ನೋ ನಿರೀಕ್ಷೆ ಇತ್ತು.
ಹೀಗಾಗಿ ಸಚಿನ್ ಭಾರತ ಕ್ರಿಕೆಟ್ ತಂಡದ ಅಚ್ಚುಮೆಚ್ಚಿನ ಆಟಗಾರ. ಅಭಿಮಾನಿಗಳ ಪಾಲಿಗೆ ಹೀರೋ ಆಗಿ ಕಂಗೊಳಿಸುತ್ತಿದ್ದರು. ಆದ್ರೆ ಸಚಿನ್ ಇಷ್ಟೇನಾ ಅನ್ನೋ ಅನುಮಾನಗಳು ಮೂಡಿದ್ದಂತೂ ಸತ್ಯ. ಯಾಕಂದ್ರೆ ವಿಶ್ವ ಕ್ರಿಕೆಟ್‍ಗೆ ಎಂಟ್ರಿಕೊಟ್ಟು 9 ತಿಂಗಳಾದ್ರೂ ಒಂದೇ ಒಂದು ಶತಕವನ್ನು ಅವರು ದಾಖಲಿಸಿರಲಿಲ್ಲ.
ತಾಯಿ ತನ್ನ ಗರ್ಭ ಧರಿಸಿ 9ನೇ ತಿಂಗಳು ಮಗುವಿಗೆ ಜನ್ಮ ನೀಡುತ್ತಾಳೆ. ಅದೇ ರೀತಿ ಸಚಿನ್ ಕೂಡ. ವಿಶ್ವ ಕ್ರಿಕೆಟ್ ಎಂಟ್ರಿಕೊಟ್ಟಿದ್ದು ನವೆಂಬರ್ 15, 1989ರಲ್ಲಿ ಪಾಕ್ ವಿರುದ್ಧ. ಸರಿಯಾಗಿ 9 ತಿಂಗಳ ನಂತರ ಅಂದ್ರೆ ಆಗಸ್ಟ್ 14, 1990ರಲ್ಲಿ ಸಚಿನ್ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ರು. ಅನಂತರ ಹಿಂತಿರುಗಿ ನೋಡಲೇ ಇಲ್ಲ. ಶತಕದ ಮೇಲೆ ಶತಕ ದಾಖಲಿಸಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ ಅವರ ಹೆಸರಿನಲ್ಲಿ ದಾಖಲಾಗಿದ್ದು 100 ಅಂತಾರಾಷ್ಟ್ರೀಯ ಶತಕಗಳು.
ಆಗಸ್ಟ್ 14, 1990. ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯ. ಭಾರತಕ್ಕೆ ಗೆಲ್ಲಲು ಬೇಕಾಗಿದ್ದು 408 ರನ್‍ಗಳ ಅಸಾಧ್ಯವಾದ ಸವಾಲು. ಅದು ಅಲ್ಲದೆ ಭಾರತ 109 ರನ್‍ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. ಮೊದಲ ಇನಿಂಗ್ಸ್ ನಲ್ಲಿ 68 ರನ್ ಗಳಿಸಿದ್ದ ತೆಂಡುಲ್ಕರ್ ಆಗ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಸಚಿನ್ ಬ್ಯಾಟಿಂಗ್ ಕ್ರಿಸ್‍ಗೆ ಆಗಮಿಸಿದ್ದಾಗ ಪಂದ್ಯ ಡ್ರಾ ಆಗುತ್ತೆ ಯಾರು ನಂಬಿರಲಿಲ್ಲ.
ಆದ್ರೆ ತೆಂಡುಲ್ಕರ್ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದರು. ಅಜೇಯ 119 ರನ್ ಸಿಡಿಸಿ ಇಂಗ್ಲೆಂಡ್ ಕೈಯಿಂದ ಗೆಲುವನ್ನು ಕಸಿದುಕೊಂಡು ಭಾರತವನ್ನು ಸೋಲಿನಿಂದ ಬಚಾವ್ ಮಾಡಿದ್ದರು. ಅಜೇಯ 119 ರನ್ ದಾಖಲಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಆದ್ರೆ ಈ ಒಂದು ಶತಕ ಸಚಿನ್ ಅವರ ಕ್ರಿಕೆಟ್ ಬದುಕಿಗೆ ಹೊಸ ತಿರುವನ್ನೇ ನೀಡಿತ್ತು. ಅಲ್ಲಿಂದ 2013ರ ತನಕ ನಡೆದಿರುವುದೆಲ್ಲಾ ಇತಿಹಾಸ.
ಇದೀಗ ಸಚಿನ್ ಅವರ ಚೊಚ್ಚಲ ಶತಕದ ಸಂಭ್ರಮಕ್ಕೆ 30ರ ಹರೆಯ. ಈ ಸಂದರ್ಭದಲ್ಲಿ ಸಚಿನ್ ತನ್ನ ಚೊಚ್ಚಲ ಶತಕವನ್ನು ನೆನಪು ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನ ಆಗಸ್ಟ್ 14, 1990ರಂದು ನಾನು ಮೊದಲ ಶತಕ ಸಿಡಿಸಿದ್ದೆ. ಇದು ಒಂಥರಾ ವಿಶೇಷವಾಗಿತ್ತು. ಆದ್ರೆ ಶಿರೋನಾಮೆ ಭಿನ್ನವಾಗಿತ್ತು. ಅಲ್ಲದೆ ಮುಂದಿನ ಓವಲ್ ಟೆಸ್ಟ್ ಪಂದ್ಯಕ್ಕೆ ಆ ಶತಕ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿತ್ತು ಅಂತಾರೆ ಸಚಿನ್ ತೆಂಡುಲ್ಕರ್.
ತನ್ನ ಚೊಚ್ಚಲ ಟೆಸ್ಟ್ ಶತಕದ ಬಗ್ಗೆ ಮಾತನಾಡಿರುವ ಸಚಿನ್ ತೆಂಡುಲ್ಕರ್, ಟೆಸ್ಟ್ ಪಂದ್ಯವನ್ನು ಬಚಾವ್ ಮಾಡುವ ಕಲೆ ನನಗೆ ಹೊಸದಾಗಿತ್ತು. ಸಿಯಾಲ್ ಕೋಟ್ ನಲ್ಲಿ ವಾಕರ್ ಯೂನಿಸ್ ಅವರ ಬೌನ್ಸರ್ ಎಸೆತಕ್ಕೆ ನನ್ನ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಜೆರ್ಸಿ ಮೇಲೆ ಕಲೆಯಾಗಿತ್ತು. ರಕ್ತ ಸಿಕ್ತವಾಗಿಯೇ ಬ್ಯಾಟಿಂಗ್ ಮಾಡಿದ್ದ ನನಗೆ ಪಂದ್ಯವನ್ನು ಉಳಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡಿದ್ದೆ ಎನ್ನುತ್ತಾರೆ ಮಾಸ್ಟರ್ ಬ್ಲ್ಯಾಸ್ಟರ್ .
ಇದಕ್ಕು ಮೊದಲು ಪಾಕ್ ವಿರುದ್ಧದ ಸಿಯಾಲ್ ಕೋಟ್ ಪಂದ್ಯದಲ್ಲಿ ನನಗೆ ಗಾಯವಾಗಿತ್ತು. ವಕಾರ್ ಯೂನಿಸ್ ಬೌನ್ಸರ್‍ನಿಂದಾಗ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಆದ್ರೂ ನಾನು ಆಡಿದ್ದೆ. ಆಗ ಭಾರತ 38 ರನ್‍ಗೆ 4 ವಿಕೆಟ್ ಕಳೆದುಕೊಂಡಿತ್ತು. ಆ ಪಂದ್ಯದಲ್ಲಿ ನಾನು 57 ರನ್ ಗಳಿಸಿದ್ದೆ. ಆಟದಲ್ಲಿ ಈ ರೀತಿಯ ಹೊಡೆತಗಳನ್ನು ತಿಂದಾಗ ನೀವು ಇನ್ನಷ್ಟು ಬಲಿಷ್ಠವಾಗುತ್ತೀರಿ ಎಂಬುದು ಸಚಿನ್ ಅಭಿಮತವಾಗಿದೆ.
ವಕಾರ್ ಯೂನಿಸ್ ಅವರ ಬೌನ್ಸರ್ ನಂತೆ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಡೇವೊನ್ ಮಾಲ್ಕಂ ಅವರಿಂದಲೂ ಹೊಡೆತ ತಿಂದಿದ್ದರು. ಹೌದು, ನಾನು ನೋವಿನಿಂದ ಬಳಲುತ್ತಿದ್ದೆ. ಆದ್ರೆ ನಾನು ಫಿಸಿಯೋ ಅವರನ್ನು ಕರೆಯಲಿಲ್ಲ. ನನ್ನ ನೋವಿನ ಮಿತಿ ತಕ್ಕ ಮಟ್ಟಿಗೆ ಹೆಚ್ಚಿತ್ತು. ಆದ್ರೂ ಅದನ್ನು ತಡೆದುಕೊಂಡೆ. ಯಾಕಂದ್ರೆ ನಿಮ್ಮ ನೋವನ್ನು ಬೌಲರ್‍ಗಳಿಗೆ ತೋರಿಸಿಕೊಳ್ಳಬಾರದು. ಇದು ಸಚಿನ್ ತೆಂಡುಲ್ಕರ್ ಅವರ ಧೈರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅದು ಅಲ್ಲದೆ ಈ ರೀತಿಯ ಎಸೆತಗಳಿಗೆ ನಾನು ಸಿದ್ಧಗೊಂಡಿದೆ. ಕೋಚ್ ರಮಕಾಂತ್ ಆಚ್ರೆಕರ್ ಶಿವಾಜಿ ಪಾರ್ಕ್ ಅಂಗಣದಲ್ಲಿ ನನಗೆ ಸುಮಾರು 25 ದಿನಗಳ ಕಾಲ ಕಠಿಣ ತರಬೇತಿ ನೀಡಿದ್ದರು. ನೋವು ಮತ್ತು ಕಣ್ಣೀರನ್ನು ಅನುಭವಿಸಿದ್ರೂ ಅದೊಂದು ಉಡುಗೊರೆಯಾಗಿತ್ತು.
ಬ್ಯಾಕ್ ಫೂಟ್ ಕವರ್ ಡ್ರೈವ್ ನನ್ನ ನೆಚ್ಚಿನ ಹೊಡೆತ. ಇದೇ ವೇಳೆ ಕ್ರಿಸ್ ಲೂಯಿಸ್ ಮತ್ತು ಆಂಗಸ್ ಫ್ರೇಸರ್ ಅವರ ಬೌಲಿಂಗ್ ಬಗ್ಗೆಯೂ ಸಚಿನ್ ನೆನಪು ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಂಗ್ಲೆಂಡ್ ತಂಡ ಪಂದ್ಯವನ್ನು ಗೆಲ್ಲಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿತ್ತು. ಆದ್ರೆ ನಾನು ಮತ್ತು ಮನೋಜ್ ಪ್ರಭಾಕರ್ ಪಂದ್ಯವನ್ನು ಬಚಾವ್ ಮಾಡುತ್ತೇವೆ ಅಂದುಕೊಂಡೇ ಕೊನೆಯ ತನಕ ಬ್ಯಾಟಿಂಗ್ ಮಾಡಿದ್ದೇವು ಎಂಬುದನ್ನು ಸಚಿನ್ ಸ್ಮರಿಸಿಕೊಳ್ಳುತ್ತಾರೆ.
ಇನ್ನು ಆ ಟೆಸ್ಟ್ ಪಂದ್ಯದಲ್ಲಿ ನನಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿತ್ತು. ಆ ವೇಳೆ ನನಗೆ ಶಾಂಪೇನ್ ಬಾಟಲ್ ನೀಡಿದ್ರು. ಆದ್ರೆ ಕುಡಿಯುವಂತಿಲ್ಲ. ಕಾನೂನು ಪ್ರಕಾರ ನನಗೆ 17 ವರ್ಷ. ನನ್ನ ಸಹ ಆಟಗಾರರು ಶಾಂಪೇನ್ ಅನ್ನು ಏನು ಮಾಡ್ತಿಯಾ ಅಂತ ಕೇಳುತ್ತಿದ್ದರು ಎಂದು ನಗು ನಗುತ್ತಲೇ ಹೇಳ್ತಾರೆ ಸಚಿನ್.
ಇನ್ನು ಸಚಿನ್‍ಗೆ ತನ್ನ ಮೊದಲ ಟೆಸ್ಟ್ ಶತಕ ನೆನಪು ಮಾಡಿಕೊಂಡಾಗ ನೆನಾಪಗೋದು ಸಂಜಯ್ ಮಾಂಜ್ರೇಕರ್. ಶತಕ ಸಿಡಿಸಿದ್ದ ಖುಷಿಗೆ ಸಂಜಯ್ ಮಾಂಜ್ರೇಕರ್ ನನಗೆ ಬಿಳಿ ಶರ್ಟ್ ಉಡುಗೊರೆಯಾಗಿ ನೀಡಿದ್ದರು. ಇದು ನನ್ನ ಮನಸ್ಸಿನಲ್ಲಿ ಇನ್ನೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ರು.