ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಾ.13ರಿಂದ 15 ರವರೆಗೆ ನಡೆದ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯಿಂದ ಐವರು ಭಾಗವಹಿಸಿರುವ ಬಗ್ಗೆ ಮಾಹಿತಿ ದೊರಕಿದೆ.
ಸದ್ಯದ ವರದಿಗಳ ಪ್ರಕಾರ ಮಂಗಳೂರು ಹೊರವಲಯದ ಚೆಂಬುಗುಡ್ಡೆ ಮತ್ತು ಪಿಲಾರು ಮೂಲದ ಇಬ್ಬರು ದಂಪತಿಗಳು ಹಾಗೂ ಸಂಘಟನೆಯೊಂದರ ಮುಖಂಡನಾಗಿರುವ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ವ್ಯಕ್ತಿ ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ದೊರಕಿದೆ. ನಗರದ ಹೊರವಲಯದ ಲಾರಿ ಚಾಲಕ, ಇನ್ನೋರ್ವ ಫರ್ಫ್ಯೂಮ್ ಅಂಗಡಿ ಮಾಲೀಕ ತಮ್ಮ ಪತ್ನಿ ಸಮೇತ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಕರ್ನಾಟಕದಿಂದ ಬೆಂಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ ಮತ್ತು ಇತರೆ ಭಾಗದವರಾದ 300 ಜನರು ಪಾಲ್ಗೊಂಡಿರುವ ಮಾಹಿತಿ ಸರಕಾರಕ್ಕೆ ಲಭ್ಯವಾಗಿದ್ದು, 40 ಜನರನ್ನು ಪತ್ತೆ ಮಾಡಲಾಗಿದೆ.
ದೆಹಲಿಯ ಬಾಂಗ್ಲಾವಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕರ್ನಾಟಕ ಮೂಲದ 300 ಜನರು ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇದರಲ್ಲಿ 40 ಜನರನ್ನ ಪತ್ತೆ ಹಚ್ಚಿದ್ದು, ಎಲ್ಲರನ್ನೂ Quarantine ಮಾಡಲಾಗುತ್ತಿದೆ. ಇದರಲ್ಲಿ 12 ಜನರ #COVID19 ಪರೀಕ್ಷೆ ವರದಿ Negative ಎಂದಿದೆ.
— B Sriramulu (@sriramulubjp) April 1, 2020
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ರಾಜ್ಯದಿಂದ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡವರಲ್ಲಿ 13 ಜನ ಸ್ವಯಂ ಆಗಿಯೇ ಬಂದು ನಮ್ಮನ್ನು ಸಂಪರ್ಕಿಸಿದ್ದಾರೆ. ಉಳಿದವರನ್ನು ನಾವು ಪತ್ತೆ ಮಾಡಿದ್ದೇವೆ. ಇನ್ನು ಉಳಿದವರು, ಅವರು ಯಾರೇ ಆಗಿರಲಿ. ಸದ್ಯದ ಪರಿಸ್ಥಿತಿ ಅರಿತು ಡಿಸಿ, ಡಿಎಚ್ಒ ಅವರನ್ನು ಸಂಪರ್ಕಿಸಿ. ನಾವು ನಿಮ್ಮ ಹೆಸರು, ವಿಳಾಸವನ್ನು ಬಹಿರಂಗಪಡಿಸುವುದಿಲ್ಲ. ನಿಮ್ಮಲ್ಲಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ದಯವಿಟ್ಟು ಕೂಡಲೇ ನಮ್ಮನ್ನು, ಅಥವಾ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಯಾರೊಬ್ಬರನ್ನಾದರೂ ತುರ್ತಾಗಿ ಸಂಪರ್ಕಿಸಿ ಎಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ದ.ಕ ಜಿಲ್ಲಾಡಳಿತವೂ ಮಾ.8 ರಿಂದ ಮಾ.20 ರವರೆಗೆ ಮರ್ಕಾಜ್ ಸಭೆಯಲ್ಲಿ ದಕ್ಷಿಣ ಕನ್ನಡದ ಸಾರ್ವಜನಿಕರು ಭಾಗವಹಿಸಿದವರಿದ್ದರೆ, ಕೊರೋನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಹಿನ್ನಲೆಯಲ್ಲಿ ಯಾರು ನಿರ್ಲಕ್ಷ್ಯ ಮಾಡದೆ ತಕ್ಷಣ 1077 ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡುವಂತೆ ತಿಳಿಸಿದೆ.
ಅಲ್ಲದೆ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ನಲ್ಲಿ ತಿಳಿಸಿದ್ದಾರೆ.








