ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿಯ 17 ನೇ ವಾರ್ಡ್‌ನಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಓರ್ವ ಮಹಿಳೆ ಹಾಗೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 35 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಜುಳ (23) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಫ್ರಿಡ್ಜ್ ರಿಪೇರಿಗೆಂದು ಬೆಂಗಳೂರಿಗೆ ತೆರಳಿದ್ದ ರಘು( 27) ಎಂಬುವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ ಐದು ಜನರ ಸ್ಥಿತಿ ಗಂಭೀರವಾಗಿದ್ದು, ಮೂವರು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಗ್ಯ ಇಲಾಖೆ ತಂಡ ಕವಾಡಿಗರಹಟ್ಟಿಯಲ್ಲಿ ಬೀಡು ಬಿಟ್ಟಿದ್ದು, ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದಲ್ಲಿ ಅಸ್ವಸ್ಥತೆ ಕಂಡು ಬಂದವರಿಗೆ ಚಿಕಿತ್ಸೆ ನೀಡಿ, ಆರೋಗ್ಯ ತಪಾಸಣೆ ಕೈಗೊಂಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್ಪಿ ಕೆ.ಪರಶುರಾಂ, ಡಿಎಚ್‌ಒ ರಂಗನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಡಿಎಚ್‌ಒ ಡಾ.ರಂಗನಾಥ್ ಮಾತನಾಡಿ’ಜಿಲ್ಲಾಸ್ಪತ್ರೆಗೆ ದಾಖಲಾದವರಲ್ಲಿ ನಾಲ್ಕೈದು ಜನರಿಗೆ ತೀವ್ರ ಸ್ವರೂಪದ ನಿರ್ಜಲೀಕರಣ ಇದೆ. ಇದರಲ್ಲಿ ಮೂವರಿಗೆ ಪ್ರತ್ಯೇಕವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಕಲುಷಿತ ನೀರಿನಿಂದ ವಾಂತಿ ಬೇಧಿ ಆಗಿರಬಹುದು ಅನಿಸುತ್ತಿದೆ. ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅದು ಕುಡಿಯಲು ಯೋಗ್ಯವಾಗಿತ್ತಾ? ಇಲ್ಲವಾ ಅನ್ನೋದು ತಿಳಿಯುತ್ತದೆ ಎಂದು ಹೇಳಿದ್ದಾರೆ.








