ಮುಂಬೈ, ಮೇ 30: ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವೇಗವಾಗಿ ಹಬ್ಬುತ್ತಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದೆ.
ಈ ನಡುವೆ ಮುಂಬೈಯ ಸಿಯೋನ್ ಆಸ್ಪತ್ರೆಯಲ್ಲಿ 36 ದಿನದ ಕಂದಮ್ಮ ಕೊರೊನಾ ವಿರುದ್ಧ ಜಯ ಸಾಧಿಸಿ ಗುಣಮುಖವಾಗಿದೆ.
ಮಹಾರಾಷ್ಟ್ರದ ಸಿಎಂ ಕಚೇರಿ ಈ ಸಂತೋಷದ ವಿಷಯವನ್ನು ಹಂಚಿಕೊಂಡಿದ್ದು , ಟ್ವಿಟರ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ವೀಡಿಯೋವನ್ನು ಪೋಸ್ಟ್ ಮಾಡಿದೆ.

ಮಹಾರಾಷ್ಟ್ರ ಸಿಎಂ ಕಛೇರಿ ಟ್ವೀಟ್ ಮಾಡಿರುವ ವೀಡಿಯೋ ದಲ್ಲಿ ಮಗುವಿನ ತಾಯಿ ಗುಣಮುಖವಾದ ಮಗುವನ್ನು ಹಿಡಿದುಕೊಂಡು ಆಸ್ಪತ್ರೆಯಿಂದ ಹೊರಬರುವಾಗ ಆಸ್ಪತ್ರೆಯ ಸಿಬ್ಬಂದಿಗಳು ಚಪ್ಪಾಳೆ ಮೂಲಕ ಶುಭ ಹಾರೈಸಿ ಮಗುವನ್ನ ಮನೆಗೆ ಕಳುಹಿಸಿಕೊಡುವ ದೃಶ್ಯವಿದೆ.
ಟ್ವೀಟ್ ಮುಖಾಂತರ ಸಂತೋಷ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೊರೊನಾದಿಂದ ಗುಣಮುಖರಾಗಲು ವಯಸ್ಸಿನ ಹಂಗಿಲ್ಲ. ಇದಕ್ಕೆ ಮೂವತ್ತಾರು ದಿನಗಳ ಮಗು ಕೊರೊನಾದಿಂದ ಗುಣಮುಖವಾಗಿರುವುದೇ ಸಾಕ್ಷಿ. ಪುಟ್ಟ ಮಗು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ನರ್ಸ್ಗಳು, ವಾರ್ಡ್ಬಾಯ್ಗಳಿಗೆ ಧನ್ಯವಾದಗಳು ಎಂದು ಮಹಾರಾಷ್ಟ್ರದ ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ.








