ಬೆಂಗಳೂರು : ಕೊರೊನಾ ಆತಂಕದ ಮಧ್ಯೆಯೂ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದು, ಇಂದು
ಆನೇಕಲ್ ತಾಲೂಕಿನ ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ ಸೇರಿ ಹಲವು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಸಚಿವರು, ಆಗಸ್ಟ್ ಮೊದಲ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಮತ್ತು ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಈಗ ಪರೀಕ್ಷೆಯಿಂದ ಹೊರಗುಳಿದಿದ್ದ 33 ಮಕ್ಕಳಿಗೆ ಆಗಸ್ಟ್ ತಿಂಗಳ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು, ಜೊತೆಗೆ ಆ ವಿದ್ಯಾರ್ಥಿಗಳನ್ನು ಫ್ರೆಶ್ ಕ್ಯಾಂಡಿಡೆಟ್ ಎಂದು ಪರಿಗಣನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್, ಈ ವರ್ಷ ಶುಲ್ಕವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವಂತೆ ಇಲ್ಲ. ಮಾನವೀಯ ಕಾರಣಕ್ಕಾಗಿ ಶುಲ್ಕ ಹೆಚ್ಚು ಮಾಡಬಾರದು. ಒಂದು ವೇಳೆ ಹೆಚ್ಚು ಮಾಡಿದರೆ ದೂರು ನೀಡುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ. ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಶುಲ್ಕ ಪಡೆಯುವುದು ಅವರಿಗೆ ಅನಿವಾರ್ಯ ಎಂದರು.








