ಮುಂಬೈ ಕಮಲಾ ಕಟ್ಟಡ ಬೆಂಕಿ – ತನಿಖೆಗೆ ಸಮಿತಿ ರಚನೆ
ಮಹಾರಾಷ್ಟ್ರದಲ್ಲಿ ಕಮಲಾ ಕಟ್ಟಡಕ್ಕೆ ಬೆಂಕಿ ಬಿದ್ದ ಪರಿಣಾಮವಾಗಿ ಅನೇಕ ಸಾವು ನೋವುಗಳಿಗೆ ಕಾರಣವಾಗಿದೆ. ಘಟನೆಯ ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಆದೇಶವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಭಾನುವಾರ ವರದಿ ಮಾಡಿದೆ. ಉಪ ಮುನ್ಸಿಪಲ್ ಕಮಿಷನರ್ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, 15 ದಿನಗಳಲ್ಲಿ ಬಿಎಂಸಿ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂಬೈನ 20 ಅಂತಸ್ತಿನ ಕಮಲಾ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿ, ಆರು ಮಂದಿ ಸಾವನ್ನಪ್ಪಿದ್ದರು. 23 ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಬೆಳಗ್ಗೆ 7.28ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಮೊದಲ ಮಾಹಿತಿ ಸಿಕ್ಕಿತು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳವು ಸುಮಾರು ಎರಡೂವರೆ ಗಂಟೆಗಳ ಕಾಲ ತೆಗೆದುಕೊಂಡಿತು, ಸಂಪೂರ್ಣವಾಗಿ ನಂದಿಸಲು ಸುಮಾರು ಐದು ಗಂಟೆಗಳಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ 2 ಲಕ್ಷ ರೂ ಪರಿಹಾರವನ್ನು ಘೋಷಿಸಿದರು. ಗಾಯಾಳುಗಳಿಗೆ 50,000 ರೂ ನೀಡುವುದಾಗಿ ಘೋಷಿಸಿದರು.
ಉದ್ಧವ್ ಠಾಕ್ರೆ ಸರ್ಕಾರವು ಮೃತರ ಕುಟುಂಬಕ್ಕೆ 5 ರೂ ಲಕ್ಷ ಪರಿಹಾರವನ್ನು ಘೋಷಿಸಿತು ಮತ್ತು ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಭರವಸೆ ನೀಡಿದೆ.








