ತಿರುಪತಿ : ಭಾರತದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ವೈರಸ್, ದೇವಸ್ಥಾನಗಳ ಮೇಲೂ ತನ್ನ ಪ್ರಭಾವ ಬೀರಿದೆ. ಕೊರೊನಾ ಸೋಂಕು ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಿಂದಾಗಿ ಎಲ್ಲ ದೇವಸ್ಥಾನಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲಿದ್ದು, ಮೇ 17ರ ಬಳಿಕ ಮತ್ತೆ ದೇವಸ್ಥಾನಗಳ ತೆರೆಯೋಕೆ ಹಲವು ಆಡಳಿತ ಮಂಡಳಿಗಳು ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿವೆ.
ಇನ್ನು ಲಾಕ್ ಡೌನ್ ಹಿನ್ನೆಲೆ ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಗೆ 400 ಕೋಟಿ ರೂಪಾಯಿ ನಷ್ಟವಾಗಿದೆಯಂತೆ. ಹೀಗಾಗಿ ತನ್ನ ಸಿಬ್ಬಂದಿಯ ವೇತನವನ್ನ ನೀಡುವಷ್ಟು ನಗದು ನಮ್ಮ ಬಳಿ ಇಲ್ಲ ಎಂದು ಟಿಟಿಡಿ ಹೇಳಿದೆ.
ಈಗಾಗಲೇ ತನ್ನ ಬಳಿ ಇದ್ದ 300 ಕೋಟಿ ರೂಪಾಯಿಯನ್ನ ಸಿಬ್ಬಂದಿ ವೇತನ, ಪಿಂಚಣಿ, ಟ್ರಸ್ಟ್ ನ ಇತರೆ ನಿಗದಿತ ಕೆಲಸಗಳಿಗೆ ಖರ್ಚು ಮಾಡಲಾಗಿದೆ. ಪ್ರತಿ ತಿಂಗಳು ಸಿಬ್ಬಂದಿಯ ವೇತನ ಹಾಗೂ ಪಿಂಚಣಿಗೆ 120 ಕೋಟಿ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಈಗ ಎದುರಾಗಿರುವ ಸಂಕಷ್ಟವನ್ನ ಪರಿಹರಿಸೋಕೆ ಪ್ರಯತ್ನಿಸಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಟಿಟಿಡಿ ಹೆಸರಿನಲ್ಲಿ 8 ಟನ್ ಚಿನ್ನ ಹಾಗೂ 14 ಸಾವಿರ ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇದೆ. ಆದ್ರೆ, ಇದನ್ನ ಮುಟ್ಟದೆ ಸಿಬ್ಬಂದಿ ವೇತನ ನೀಡೋಕೆ ಈಗ ಟಿಟಿಡಿ ಮಾರ್ಗಗಳನ್ನ ಹುಡುಕುತ್ತಿದೆ.








