ನಟ ಶಿವರಾಜಕುಮಾರ್ (Shivaraj Kumar), ರಿಯಲ್ ಸ್ಟಾರ್ ಉಪೇಂದ್ರ (Upendra), ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಚಿತ್ರ ತಂಡ ಸಂತಸ ವ್ಯಕ್ತಪಡಿಸಿದೆ.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದಿ.
ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ. ಈ ವಿಷಯವಾಗಿ ಇಂದು ಚಿತ್ರ ತಂಡ ಮಾತನಾಡಿದೆ. ಶಿವರಾಜಕುಮಾರ್ ಮಾತನಾಡಿ, ಚಿತ್ರದಲ್ಲಿ ನಾವು ಮೂವರು ನಟಿಸಿದ್ದೇವೆ. ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಉಪೇಂದ್ರ ಅವರ ಜೊತೆ ನಟಿಸಲು ನಾನು ಯಾವಾಗಲೂ ಸಿದ್ದ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ನಟಿಸಿದ್ದು ಸಂತೋಷವಾಗಿದೆ.
ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಚಿತ್ರ ಎಂದು ಹೇಳಲು ಆಗುವುದಿಲ್ಲ. ಅದ್ಭುತ ನಿರ್ದೇಶನವನ್ನು ಅವರು ಮಾಡಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಹಸ ಸನ್ನಿವೇಶಗಳು ಸೂಪರ್. “45” ಇಡೀ ಭಾರತೀಯರೆ ಮೆಚ್ಚುವಂತಹ ಆಕ್ಷನ್ ಚಿತ್ರವಾಗಲಿದೆ ಎಂದರು.
ಉಪೇಂದ್ರ ಮಾತನಾಡಿ, ಅರ್ಜುನ್ ಜನ್ಯ ಅವರು ಅಂದುಕೊಂಡಂತೆ ಚಿತ್ರ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ಸಾಥ್ ನೀಡಿದ್ದಾರೆ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಜೊತೆಗೆ ಅಭಿನಯಿಸಿದ್ದು ಸಂತಸವಾಗಿದೆ ಎಂದು ತಿಳಿಸಿದ ನಟ ಉಪೇಂದ್ರ, ಚಿತ್ರೀಕರಣ ಮುಗಿದಿದೆ. ಚಿತ್ರವನ್ನು ಅದಷ್ಟು ಬೇಗ ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರ “45”, ಕನ್ನಡಿಗರು ಹೆಮ್ಮೆಯ ಪಡುವ ಸಿನಿಮಾ ಅಂತ ಕನ್ನಡಿಗನಾಗಿ ಹೇಳುತ್ತೇನೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೂ ಹೆಮ್ಮೆಯಿದೆ ಎಂದರು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ಅರ್ಜುನ್ ಜನ್ಯ, ಮೊದಲು ನನಗೂ ಆತಂಕ ಇತ್ತು. ಆದರೆ ಚಿತ್ರೀಕರಣ ಶುರುವಾದ ಮೇಲೆ ಅವರು ಪ್ರತಿಯೊಂದು ಸನ್ನಿವೇಶಗಳನ್ನು ನನಗೆ ಕಳುಹಿಸುತ್ತಿದ್ದರು. ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮೂರು ಜನರು ನನ್ನ ಚಿತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ ಎಂದು ಹೇಳಿದ್ದಾರೆ.