ಉಡುಪಿ, ಮೇ 20: ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾಗಿ, ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದಂತೆ ಕೊರೊನಾ ಸೋಂಕು ಪ್ರಕರಣಗಳಲ್ಲಿ ಏಕಾಏಕಿ ಹೆಚ್ಚಳ ಕಂಡು ಬಂದಿದೆ. ಕೊರೋನಾ ಮುಕ್ತ ಎನಿಸಿಕೊಂಡ ರಾಜ್ಯದ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಲಾಕ್ ಡೌನ್ ನಿಂದ ದೇಶದ ವಿವಿಧೆಡೆಯಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು, ಪರ ಊರಿನಲ್ಲಿದ್ದವರು, ವಿದೇಶದಲ್ಲಿದ್ದ ಭಾರತೀಯರು ತಮ್ಮೂರುಗಳಿಗೆ ವಾಪಸಾದ ಕಾರಣ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದೇಶದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರಿರುವ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸಿ ವಿವಿಧ ರಾಜ್ಯಗಳಲ್ಲಿ ಸರಕಾರಿ ಕ್ವಾರಂಟೈನ್ ಗೆ ಒಳಗಾದವರಲ್ಲಿ ಕೊರೊನಾ ಸೋಂಕು ನಿರಂತರ ಹೆಚ್ಚಳವಾಗುತ್ತಿದ್ದು, ಪ್ರಕರಣಗಳ ಏರಿಕೆಗೆ ಕಾರಣವಾಗಿದೆ.
ಕೊರೋನಾ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಉಡುಪಿ ಜಿಲ್ಲೆ ಹಸುರು ಜಿಲ್ಲೆ ಎಂದು ಮಾನ್ಯತೆ ಪಡೆದಿತ್ತು. ಇದೀಗ ಜಿಲ್ಲೆಯಲ್ಲಿ ಒಟ್ಟು 5 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 4 ಪ್ರಕರಣಗಳು ಮುಂಬೈಯಿಂದ ಜಿಲ್ಲೆಗೆ ಆಗಮಿಸಿದವರಲ್ಲಿ ಕಂಡುಬಂದಿದೆ. ಪತ್ತೆಯಾದ ನಾಲ್ಕು ಪ್ರಕರಣಗಳು ಕ್ವಾರೆಂಟೈನ್ ನಲ್ಲಿದ್ದುದರಿಂದ ಕೊರೊನಾ ಪರೀಕ್ಷಾ ವರದಿಯಲ್ಲಿ ಸೋಂಕು ಖಚಿತವಾಗುತ್ತಿದ್ದಂತೆ ಉಡುಪಿಯ ಕೊರೊನಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದು ಕೊರೊನಾ ಪ್ರಕರಣ ಮಣಿಪಾಲ ಆಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸೆಗೆಂದು ಚಿತ್ರದುರ್ಗದಿಂದ ಬಂದಿರುವ 17 ವರ್ಷದ ಬಾಲಕಿಯಲ್ಲಿ ಪತ್ತೆಯಾಗಿದೆ. ಈ ಮೊದಲೇ ಗಂಭೀರ ಕಾಯಿಲೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಗೆ ಕೊರೊನಾ ಸೋಂಕು ತಗುಲಿರುವುದು, ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಡುಪಿ ಜಿಲ್ಲಾಧಿಕಾರಿ ಈ ಸಂಬಂಧ ತಜ್ಞ ವೈದ್ಯರ ತಂಡದ ಜೊತೆ ಸಮಾಲೋಚನೆ ನಡೆಸಿ, ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ಬಂದಿದ್ದ ಬಾಲಕಿಯಲ್ಲಿ ಕೊರೊನಾ ಸೋಂಕು ಸಂಬಂಧಿಸಿ ಯಾವುದೇ ಗುಣ ಲಕ್ಷಣಗಳು ಇರಲಿಲ್ಲ. ಆಕೆ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಮಣಿಪಾಲದ ಆಸ್ಪತ್ರೆಗೆ ಬಂದಿದ್ದರು. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ಆಕೆಯ ಸಂಪರ್ಕ ಮಾಹಿತಿ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನೂ ಡಿ.ಸಿ ಜಗದೀಶ್ ಅವರು ಇದೇ ಸಂದರ್ಭದಲ್ಲಿ ನೀಡಿದರು.
ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಕೊರೊನಾ ಸೋಂಕು ತಡೆಗಟ್ಟಲು ಅನುಸರಿಸಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುವ ಪರಿಸ್ಥಿತಿ ಉಂಟಾಗಿಲ್ಲ. ಅಲ್ಲದೇ ಬಾಲಕಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರನ್ನು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಕೂಡ ಕ್ವಾರೆಂಟೈನ್ ಗೊಳಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆಮಣಿಪಾಲದ ಕೆ.ಎಂ.ಸಿ.ಯಲ್ಲಿ ಈಗಾಗಲೇ ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯ ಪ್ರಾರಂಭಗೊಂಡಿದ್ದು, ಪರೀಕ್ಷೆ ಪ್ರಾರಂಭಿಸಿದೆ.
ಹೊರ ರಾಜ್ಯಗಳಿಂದ ಬಹಳಷ್ಟು ಜನರು ಜಿಲ್ಲೆಗೆ ಬಂದಿರುವುದರಿಂದ ಅವರೆಲ್ಲರ ಗಂಟಲ ದ್ರವ ಮಾದರಿಯನ್ನು ಪರೀಕ್ಷಿಸುವುದು ಅನಿವಾರ್ಯವಾಗಿದ್ದು, ಮೂರು ಶಿಫ್ಟ್ ಗಳಲ್ಲಿ ಮಾದರಿ ಪರೀಕ್ಷೆಗಳನ್ನು ನಡೆಸುವಂತೆ ಆಸ್ಪತ್ರೆಯವರನ್ನು ಈಗಾಗಲೇ ಕೇಳಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಹೇಳಿದರು. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೂಡ ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯ ಪ್ರಾರಂಭಿಸುವ ಸಲುವಾಗಿ ಪ್ರಾಥಮಿಕ ಹಂತದ ಕಾರ್ಯಗಳು ನಡೆಯುತ್ತಿದೆ. 15 ರಿಂದ 20 ದಿನಗಳ ಒಳಗಾಗಿ 1.5 ಕೋಟಿ ರೂಪಾಯಿ ವೆಚ್ಚದ ಸುಸಜ್ಜಿತ ಕೋವಿಡ್ ಲ್ಯಾಬ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸಿದ್ಧಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಯವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.