ಅಕ್ಟೋಬರ್ ವೇಳೆಗೆ ಇನ್ನೂ 5 ಕೊರೊನಾ ಲಸಿಕೆಗಳು ದೇಶದಲ್ಲಿ ಲಭ್ಯ
ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ದಿನನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ.
ಈ ಮಧ್ಯೆ ಕೊರೊನಾ ಲಸಿಕಾ ಅಭಿಯಾನ ಇದ್ದೂ ಇಲ್ಲದಂತಾಗಿದೆ. ಸಾಕಷ್ಟು ರಾಜ್ಯಗಳಲ್ಲಿ ಲಸಿಕೆಯ ಅಭಾವ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾಧನೆಯನ್ನ ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ.
ಮೂಲಗಳ ಪ್ರಕಾರ ದೇಶೀಯ ಲಸಿಕೆಯಲ್ಲದೇ ಅಕ್ಟೋಬರ್ ವೇಳೆಗೆ ಇನ್ನೂ 5 ಕೊರೊನಾ ವ್ಯಾಕ್ಸಿನ್ ಗಳು ಭಾರತದಲ್ಲಿ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ.
ಸದ್ಯ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎಂಬ ದೇಶಿಯ ಲಸಿಕೆಗಳು ಲಭ್ಯವಿದ್ದು, ಇವುಗಳನ್ನೇ ಜನರಿಗೆ ನೀಡಲಾಗುತ್ತಿದೆ.
ಇವುಗಳನ್ನ ಹೊರತುಪಡಿಸಿ ಅಕ್ಟೋಬರ್ ವೇಳೆಗೆ ಸ್ಪುಟ್ನಿಕ್ ವಿ, ಜಾನ್ಸನ್ ಮತ್ತು ಜಾನ್ಸನ್, ಸೀರಂನ ನೊವಾವಾಕ್ಸ್, ಝೈಡಸ್ ಕ್ಯಾಡಿಲಾದ ಲಸಿಕೆ ಹಾಗೂ ಭಾರತ್ ಬಯೋಟೆಕ್ ನ ಇಂಟ್ರಾನಾಸಲ್ ಲಸಿಕೆ – ಈ ಐದು ಲಸಿಕೆಗಳನ್ನು ನಿರೀಕ್ಷಿಸಬಹುದಾಗಿದೆ.