ಭೀಕರ ಚಂಡಮಾರುತಕ್ಕೆ ತತ್ತರಿಸಿದ ಅಮೆರಿಕಾ, 100 ಕ್ಕೂ ಹೆಚ್ಚು ಜನ ಸಾವು
ಅಮೆರಿಕದ ಕನಿಷ್ಠ 5 ರಾಜ್ಯಗಳಲ್ಲಿ, ಶನಿವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಚಂಡಮಾರುತ ಬೀಸಿದ್ದು ಭಾರಿ ವಿನಾಶ ಸಂಭವಿಸಿದೆ. ಕೆಂಟುಕಿ ರಾಜ್ಯದಲ್ಲಿಯೇ, 100 ಜನರು ಸತ್ತಿದ್ದಾರೆ ಮತ್ತು ಇನ್ನೂ ಅನೇಕರು ಅವಶೇಷಗಳಡಿಯಲ್ಲಿ ಸಿಲುಕಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಮೇರಿಕಾದ ಮೇಫೀಲ್ಡ್ ಪ್ರದೇಶದಲ್ಲಿ ಗರಿಷ್ಠ ಅವಘಡಗಳು ಸಂಭವಿಸಿವೆ. ಗಂಟೆಗೆ 200 ಮೈಲುಗಳಷ್ಟು ವೇಗದಲ್ಲಿ ಚಂಡಮಾರುತವು ಅಪ್ಪಳಿಸಿದೆ. ಮೇಫೀಲ್ಡ್ನಲ್ಲಿ ಕ್ಯಾಂಡಲ್ ಫ್ಯಾಕ್ಟರಿ ಕುಸಿದು 18 ಮಂದಿ ಸಾವನ್ನಪ್ಪಿದ್ದಾರೆ. ಇಲಿನಾಯ್ಸ್ ರಾಜ್ಯದಲ್ಲಿ ಅಮೆಜಾನ್ ಕಂಪನಿಯ ಗೋದಾಮು ಕುಸಿದಿದ್ದು, ಸುಮಾರು 100 ಕಾರ್ಮಿಕರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ. ಇದಲ್ಲದೇ ಅರ್ಕಾನ್ಸಾಸ್ನಲ್ಲಿ ನರ್ಸಿಂಗ್ ಹೋಂ ಕಟ್ಟಡ ಕುಸಿದು 20 ಮಂದಿ ಸಮಾಧಿಯಾಗಿದ್ದು, ಅದರಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ.
ಕೆಂಟುಕಿ ರಾಜ್ಯದ ಗವರ್ನರ್ ಆಂಡಿ ಬೆಶಿಯರ್ ಅವರು ಚಂಡಮಾರುತವನ್ನು ತಮ್ಮ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಭೀಕರ ಚಂಡಮಾರುತ ಎಂದು ಬಣ್ಣಿಸಿದ್ದಾರೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಮಾಧ್ಯಮ ವರದಿಗಳ ಪ್ರಕಾರ, ಮೇಫೀಲ್ಡ್ ಪ್ರದೇಶದಲ್ಲಿನ ಕ್ಯಾಂಡಲ್ ಫ್ಯಾಕ್ಟರಿ ಚಂಡಮಾರುತದಿಂದ ಭಾರಿ ಹಾನಿಗೊಳಗಾಗಿದೆ. ಗವರ್ನರ್ ಬೆಶಿಯರ್ ಪ್ರಕಾರ, ಚಂಡಮಾರುತವು ಕಾರ್ಖಾನೆಯನ್ನು ಅಪ್ಪಳಿಸಿದಾಗ ಸುಮಾರು 110 ಜನರು ಅದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲವರು ಇಲ್ಲೇ ಅವಶೇಷಗಳ ಅಡಿಯಲ್ಲಿ ಸಮಾಧಿಯಾಗಿದ್ದಾರೆ. ಅವರನ್ನು ರಕ್ಷಿಸಲು ಸಮೀಪದ ಗ್ರೇವ್ಸ್ ಕೌಂಟಿ ಜೈಲಿನ ಕೈದಿಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲ್ಲಿ 18 ಶವಗಳು ಪತ್ತೆಯಾಗಿವೆ ಎಂದು ಕೆಲವು ಮೂಲಗಳು ಹೇಳಿದ್ದರೂ, ರಾಜ್ಯಪಾಲರು 10 ಜನರ ಸಾವನ್ನು ಖಚಿತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಸಾವನ್ನಪ್ಪಿರುವ ಸಾಧ್ಯತೆ ಇದೆ.
ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಇದನ್ನು ಇತಿಹಾಸದ ಅತಿದೊಡ್ಡ ಚಂಡಮಾರುತಗಳಲ್ಲಿ ಒಂದು ಎಂದು ವ್ಯಾಖ್ಯಾನಿಸಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಿಡೆನ್ ಮಾತನಾಡಿದ್ದು, ಇದೊಂದು ದುರಂತವಾಗಿದೆ. ಒಟ್ಟು ಎಷ್ಟು ಜನ ನಾಪತ್ತೆಯಾಗಿದ್ದಾರೆ, ಹಾನಿ ಯಾವ ಪ್ರಮಾಣದಲ್ಲಾಗಿದೆ ಎಂಬುದರ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.