ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಲವು ಕ್ರಮ ಕೈಗೊಂಡಿದೆ.
ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರನ್ನು ಬೇರೆ ಉದ್ಧೇಶಕ್ಕೆ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದು ಕಂಡರೆ 5 ಸಾವಿರ ದಂಡ ಹಾಕಲಾಗುವುದು ಎಂದು ಮಂಡಳಿ ಆದೇಶ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ, ಕುಡಿಯುವ ನೀರನ್ನು ಅನ್ಯ ಬಳಕೆಗೆ ನಿಷೇಧಿಸಲಾಗಿದೆ. ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟ, ಕಟ್ಟಡ ನಿರ್ಮಾಣ, ಮನರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಬಳಸಬಾರದು.
ಸಿನಿಮಾ ಮಂದಿರ ಮತ್ತು ಮಾಲ್ ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಬಳಸಲು ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಉಲ್ಲಂಘನೆ ಮರುಕಳಿಸಿದರೆ ದಂಡದ ಮೊತ್ತ 5 ಸಾವಿರ ರೂ. ಜೊತೆಗೆ 500 ರೂ. ಹೆಚ್ಚುವರಿಯಾಗಿ ದಂಡ ಹಾಕುವುದಾಗಿ ಮಂಡಳಿ ತಿಳಿಸಿದೆ.








