ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಮುಂದುವರಿದಿದ್ದು, ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಕೊರೊನಾ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಲವರು ದೇಣಿಗೆ ನೀಡುತ್ತಿದ್ದಾರೆ. ಅದರಂತೆ ಇದೀಗ ಚಾಮರಾಜನಗರದಲ್ಲಿ ನವ ಜೋಡಿ ಸರಳ ವಿವಾಹ ಮಾಡಿಕೊಂಡು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರ ಮೂರ್ತಿ, ಹರವೆ ಗ್ರಾಮದ ಮೇಘನಾ ಎಂಬುವರನ್ನು ವರಿಸಿದ್ದಾರೆ. ಇವರು ವಧುವಿನ ಸ್ವಗ್ರಾಮದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದು, ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಸಾವಿರ ರೂಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದಾರೆ.








