ಬೆಂಗಳೂರಿನಲ್ಲಿವೆ 51 ಅನಧಿಕೃತ ಖಾಸಗಿ ಶಾಲೆಗಳು – ನೋಟೀಸ್ ಜಾರಿ…
ರಾಜ್ಯದಲ್ಲಿ ಅನುಮತಿಯೇ ಇಲ್ಲದೆ ನಡೆಸುತ್ತಿರುವ ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಸಮರ ಸಾರಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಇಂತಹ 51 ಶಾಲೆಗಳನ್ನು ಪತ್ತೆ ಮಾಡಿ ನೋಟಿಸ್ ನೀಡಿದ್ದಾರೆ.
ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಕಡ್ಡಾಯವಾಗಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಎನ್ಒಸಿ, ಕಟ್ಟಡ ಗುಣಮಟ್ಟದ ಪ್ರಮಾಣಪತ್ರ ಪಡೆದಿರಬೇಕು. ಶಿಕ್ಷಣ ಇಲಾಖೆ ನಿಯಮಗಳನ್ನ ಪಾಲನೆ ಮಾಡಬೇಕು. ಒಂದು ವೇಳೆ ಪಾಲನೆ ಮಾಡದೇ ಇರುವ ಯಾವುದೇ ಶಾಲೆಯಾದರೂ ಅವು ಅನಧಿಕೃತ ಶಾಲೆಗಳು ಎಂದೇ ಪರಿಗಣಿಸಲಾಗುತ್ತದೆ.
ಖಾಸಗಿ ಶಾಲೆಗಳು ಸರ್ಕಾರದ ಕಾಯ್ದೆ, ಕಾನೂನುಗಳನ್ನು ಪಾಲಿಸುತ್ತಿಲ್ಲ. ವಿವಿಧ ಜಿಲ್ಲೆಗಳಲ್ಲಿ ಅನೇಕ ಶಾಲೆಗಳು ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪರಿಶೀಲನೆ ನಡೆಸಿದ್ದು 51 ಶಾಲೆಗಳಿಗೆ ನೋಟೀಸ್ ನೀಡಲಾಗಿದೆ.
ಈ ನೋಟಿಸ್ಗೆ ಶಾಲೆಗಳು ನೀಡುವ ಉತ್ತರವನ್ನು ಆಧರಿಸಿ ಆ ಶಾಲೆಗಳನ್ನು ಬಂದ್ ಮಾಡಬೇಕಾ ಮುಂದುವರೆಸಬೇಕಾ ಎಂಬ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಳ್ಳಲಿದೆ. 51 ಶಾಲೆಗಳ ಪೈಕಿ ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿ ಹೆಚ್ಚು 38 ಶಾಲೆಗಳನ್ನು ಪತ್ತೆ ಹೆಚ್ಚಲಾಗಿದೆ. ಉಳಿದಂತೆ ಬೆಂಗಳೂರು ಉತ್ತರ ವಲಯದಲ್ಲಿ 11 ಶಾಲೆಗಳು ಮತ್ತು ಆನೇಕಲ್ ತಾಲೂಕಿನಲ್ಲಿ ಎರಡು ಶಾಲೆಗಳು ಶಿಕ್ಷಣ ಇಲಾಖೆ ಕಾಯ್ದೆಯ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.