ಬೆಂಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಇಂದು 63 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 4, ಮಂಡ್ಯ 8, ಕಲಬುರಗಿ 7, ಬೀದರ್ 10, ಉತ್ತರ ಕನ್ನಡ 1, ಹಾಸನ 21, ತುಮಕೂರು 4, ಯಾದಗಿರಿ ಒಂದು ಪ್ರಕರಣಗಳು ಬೆಳಕಿಗೆ ಬಂದಿದೆ.
ಇಂದು ಕೊರೊನಾ ಸೋಂಕಿನಿಂದ 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 1458 ಸೋಂಕಿರ ಪೈಕಿ ಇದುವರೆಗೂ 553 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 864 ಸಕ್ರಿಯ ಕೊರೊನಾ ಪ್ರಕರಣಗಳಿವೆ.
ಅನುಮಾನ ಮೂಡಿಸಿದ ಆರೋಗ್ಯ ಇಲಾಖೆ ನಡೆ
ಇಷ್ಟು ದಿನ ಸೋಂಕಿತರ ವಿವರವನ್ನು ಪ್ರಕಟಿಸುತ್ತಿದ್ದ ಆರೋಗ್ಯ ಇಲಾಖೆ ಇಂದು ಕೇವಲ ಒಟ್ಟು ಸಂಖ್ಯೆಯನ್ನು ಬಹಿರಂಗಪಡಿಸಿದೆ. ಆದ್ರೆ ಸೋಂಕಿತರಿಗೆ ಕೊರೊನಾ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಮುಚ್ಚಿಟ್ಟಿದೆ. ಬಹುತೇಕ ಸೋಂಕಿತರು ಮುಂಬೈ ಮೂಲದವರಾಗಿದ್ದು, ಸರ್ಕಾರ ತನ್ನ ತಪ್ಪನ್ನು ಮರೆ ಮಾಡಲು ಈ ನಿರ್ಧಾರ ಕೈಗೊಂಡಿದೆಯಾ ಎಂಬ ಅನುಮಾನಗಳು ಮೂಡಿವೆ.








