ಜುಲೈ 14ರ ರಾತ್ರಿ 8 ಗಂಟೆಯಿಂದ ಜುಲೈ 22ರವರೆಗೆ ಬೆಂಗಳೂರು ಮತ್ತು ಬೆಂಗಳೂರು (ಗ್ರಾ) ಲಾಕ್ ಡೌನ್
ಬೆಂಗಳೂರು, ಜುಲೈ 11: ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜು.15ರಿಂದ ಒಂದು ವಾರ ಸಂಪೂರ್ಣ ಲಾಕ್ ಡೌನ್ ಗೆ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಬೆಂಗಳೂರು ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ಜು.14ರ ರಾತ್ರಿ 8 ಗಂಟೆಯಿಂದ ಜು.23ರ ಬೆಳಗ್ಗೆವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಹಾಲು, ಮೆಡಿಕಲ್, ಆಸ್ಪತ್ರೆ, ತರಕಾರಿ, ದಿನಸಿ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದ್ದು, ಪೆಟ್ರೋಲ್ ಬಂಕ್ ಗಳು ತೆರೆದಿರುತ್ತದೆ.

ಬೆಂಗಳೂರು ನಗರದಿಂದ ಹೊರ ಹೋಗುವ ಹಾಗೂ ಬೆಂಗಳೂರು ನಗರಕ್ಕೆ ಬರುವ ವಾಹನಗಳಿಗೆ ನಿರ್ಬಂಧ ಹೇರಲಾಗಿದ್ದು, ಹೋಟೆಲ್, ಕೆಎಸ್ ಆರ್ ಟಿಸಿ ಬಸ್, ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ ಇರುವುದಿಲ್ಲ.
ಸೋಮವಾರ ಲಾಕ್ ಡೌನ್ ನ ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.








