ನವದೆಹಲಿ: ಅಶಿಸ್ತಿನ ನಡವಳಿಕೆ ತೋರಿದ ಆರೋಪದಲ್ಲಿ 7 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದಾರೆ. ಸಂಸತ್‌ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಕಲಾಪದ ವೇಳೆ ಸಂಸದರು ಪೇಪರ್ ಹರಿದು ಸ್ಪೀಕರ್ ಅವರತ್ತ ಎಸೆದು, ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಗೌರವ್ ಗೊಗೊಯಿ, ಟಿ.ಎನ್.ಪ್ರತಾಪನ್, ಡಿಯನ್ ಕುರಿಕೋಸ್, ಆರ್. ಉಣ್ಣಿತ್ತಾನ್, ಮನಿಕಮ್ ಟಾಗೋರ್, ಬೆನ್ನಿ ಬೆಹ್ನನ್ ಮತ್ತು ಗುರ್‌ಜೀತ್ ಸಿಂಗ್ ಔಜ್‌ಲಾ ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದರಾಗಿದ್ದಾರೆ. ಇನ್ನು ಸಂಸದರ ಅಮಾನತು ಆದೇಶವನ್ನು ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಪಾಸ್ ಮಾಡಲಾಯಿತು.
ಕಾಂಗ್ರೆಸ್ ಆಕ್ಷೇಪ
ತನ್ನ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸ್ಪೀಕರ್ ನಿರ್ಧಾರವಲ್ಲ. ಸರ್ಕಾರದ ನಿರ್ಧಾರ. ಇದಕ್ಕೆ ನಾವು ತಲೆಬಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧದ ನಮ್ಮ ಹೋರಾಟ ಸಂಸತ್‌ನ ಒಳಗೆ ಮತ್ತು ಹೊರಗೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.