ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಏಳು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅವುಗಳ ಪೈಕಿ ಐದು ಪ್ರಕರಣ ಕಲಬುರಗಿ ಒಂದರಿಂದಲೇ ಬಂದಿದೆ. ಇನ್ನೆರಡು ಪ್ರಕರಣ ಬೆಂಗಳೂರು ನಗರದಲ್ಲಿ ಪತ್ತೆಯಾಗಿದೆ. ಕಲಬುರಗಿಯಲ್ಲಿ ನಾಲ್ಕು ತಿಂಗಳ ಗಂಡು ಶಿಶು ಸೇರಿದಂತೆ 28, 35 ಮತ್ತು 46 ವಯಸ್ಸಿನ ಮೂವರು ಮಹಿಳೆಯರು ಹಾಗೂ 57 ವರ್ಷದ ಓರ್ವ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 28 ವರ್ಷದ ಯುವತಿ ಹಾಗೂ 54 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 425ಕ್ಕೆ ಏರಿದೆ. ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 15 ಮಂದಿ ಗುಣಮುಖರಾಗಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ 129 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.








