ಹೊಸದಿಲ್ಲಿ, ಮೇ 30 : ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಜಿ.ಎಸ್.ಟಿ ಸಂಗ್ರಹದಲ್ಲಿ 70% ಕುಸಿತವುಂಟಾಗಿದೆ. ದೇಶದಾದ್ಯಂತ ಸುಮಾರು ಮೂರು ತಿಂಗಳ ಕಾಲ ಜಾರಿಯಲ್ಲಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಮುಚ್ಚಿದ್ದ ಕಾರಣದಿಂದ ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಬಳಿಕ ಲಾಕ್ ಡೌನ್ 4ನೇ ಹಂತದಲ್ಲಿ ನಿರ್ಬಂಧಗಳನ್ನು ಸಡಿಲಿಸಿ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರೂ ಜಿ.ಎಸ್.ಟಿ ಸಂಗ್ರಹದ ಮೇಲೆ ಅದು ಯಾವ ಪರಿಣಾಮ ಬೀರಿಲ್ಲ.
ದೇಶದಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಸಂಗ್ರಹ ಕುಸಿದಿದ್ದು, ಸಿಜಿಎ ಬಿಡುಗಡೆ ಮಾಡಿದ ಅಂಕಿ ಅಂಶಗಳು ಏಪ್ರಿಲ್‌ನಲ್ಲಿ ಜಿ.ಎಸ್.ಟಿ ಸಂಗ್ರಹವು 70 ಪರ್ಸೆಂಟ್‌ರಷ್ಟು ಕುಸಿದಿದೆ ಎಂದು ತೋರಿಸಿದೆ.
2019 ರ ಏಪ್ರಿಲ್‌ನಲ್ಲಿನ ಜಿ.ಎಸ್.ಟಿ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲು ಸೇರಿ 1,13,865 ಕೋಟಿ ರೂಪಾಯಿಗಳಾಗಿದ್ದರೆ, ಏಪ್ರಿಲ್ 2020 ಕ್ಕೆ ಬಿಡುಗಡೆಯಾದ ಮಾಹಿತಿಯ ಪ್ರಕಾರ ಈ ತಿಂಗಳಲ್ಲಿ ಜಿ.ಎಸ್.ಟಿ ಸಂಗ್ರಹದಲ್ಲಿ ಕೇಂದ್ರದ ಪಾಲು 16,707 ಕೋಟಿ ರೂಪಾಯಿ. ಇದು ಕಳೆದ ವರ್ಷದ 55,329 ಕೋಟಿ ರೂಪಾಯಿಗಳಿಗಿಂತ 70% ಕಡಿಮೆಯಾಗಿದೆ.
ಕೊರೋನಾ ವೈರಸ್ ಸೋಂಕಿನ ಕಾರಣದಿಂದ ಜಾರಿಯಲ್ಲಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆದಾರರ ಮೇಲಿನ ಹೊರೆ ಕಡಿಮೆ ಮಾಡಲು ಸರ್ಕಾರ ಮಾರ್ಚ್ 24 ರಂದು ಹಲವಾರು ಘೋಷಣೆಗಳನ್ನು ಮಾಡಿತು. ಐದು ಕೋಟಿ ರೂಪಾಯಿಗಳಿಗಿಂತ ಕಡಿಮೆ ವಹಿವಾಟು ನಡೆಸುವ ಕಂಪನಿಗಳು, ತಡವಾಗಿ ಜಿ.ಎಸ್.ಟಿ ಸಲ್ಲಿಸಲು ಅನುಮತಿ ನೀಡಿದ್ದು, ಅದಕ್ಕಾಗಿ ಯಾವುದೇ ಯಾವುದೇ ವಿಳಂಬ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿತ್ತು. ಐದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಜೂನ್ ಕೊನೆಯ ವಾರದವರೆಗೆ ರಿಟರ್ನ್ಸ್ ಸಲ್ಲಿಸಬಹುದಾಗಿದ್ದು, 9% ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ ಎಂದು ಪ್ರಕಟಣೆಗಳಲ್ಲಿ ತಿಳಿಸಿತ್ತು.
ಏಪ್ರಿಲ್ 2020 ರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಸಂಗ್ರಹದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕುಸಿತ ಉಂಟಾಗಲು ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್ ಡೌನ್ ಕಾರಣ ಎಂದು ಅಂದಾಜಿಸಲಾಗಿದೆ.








