ಇಂದಿನಿಂದಲೇ ನವ ಕರ್ನಾಟಕದ ನಿರ್ಮಾಣ ಪ್ರಾರಂಭ : ಬೊಮ್ಮಾಯಿ
ಬೆಂಗಳೂರು : ಇಂದಿನಿಂದಲೇ ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಮೂಲಕ ನವ ಕರ್ನಾಟಕದ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
75 ನೇ ವರ್ಷದ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ರಾಜ್ಯದ ಜನತಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲು ಎಲ್ಲರಿಗೂ ಶುಭಾಶಯ ಕೋರಿದರು. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಮುಖ್ಯವಾಗಿ ಹಲವು ಸಂಸ್ಕøತಿ, ಧರ್ಮಗಳನ್ನು ಒಳಗೊಂಡ ಭಾರತ, ಜನರಿಂದ ಜನರಿಗೊಸ್ಕರ ಇರುವ ವ್ಯವಸ್ಥೆಯನ್ನು ನಮ್ಮ ಸಂವಿಧಾನ ಮಾಡಿಕೊಟ್ಟಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಲು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕಾರಣ ಎಂದರು.
ಇದೇ ವೇಳೆ ಗೋಪಾಲ್ ಕೃಷ್ಣ ಗೋಕುಲೆ, ಬಾಲಗಂಗಾಧರ್ ತಿಲಕ್, ಸುಭಾಸ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್ ಅವರ ತ್ಯಾಗ ಬಲಿದಾನವನ್ನು ಸ್ಮರಿಸಿದ ಬೊಮ್ಮಾಯಿ, ರಾಣಿ ಚೆನ್ನಮ್ಮ ನಮ್ಮೆಲ್ಲರ ಅಭಿಮಾನದ ಸಂಕೇತ ಎಂದರು.
ಇನ್ನು ರಾಯಣ್ಣರ ತ್ಯಾಗ, ಬಲಿದಾನ ಬಹಳ ಮಹತ್ವದ್ದಾಗಿದೆ. ರಾಯಣ್ಣರ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ರಾಯಣ್ಣ ಜನ್ಮದಿನ ಆಚರಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ಸ್ವಾತಂತ್ರಯಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಭಾವಪೂರ್ಣ, ನಮನಗಳನ್ನು ಸಲ್ಲಿಸಿದರು.
ಮುಂದುವರೆದು ಮಾತನಾಡುತ್ತಾ, ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಮೂಲಕ ನವ ಕರ್ನಾಟಕದ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿದ ಬೊಮ್ಮಾಯಿ, ರೈತ ಕೇಂದ್ರಿತ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದೇವೆ. ರೈತರ ಬದುಕಿನಲ್ಲಿ ಕ್ರಾಂತಿ ತರುವ ಕಾಲ ಬಂದಿದೆ. ನನಗೆ ನೀಡಿರುವ 20 ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ರಾಜ್ಯದ ಪ್ರತಿಯೊಬ್ಬರ ಬದುಕು ಹಸನಾಗಬೇಕು ಎಂದರು.









