75ನೇ ಸ್ವಾತಂತ್ರ್ಯ ದಿನ | ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ನಮೋ
ನವದೆಹಲಿ : ಇಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಎಲ್ಲೆಲ್ಲೂ ತಿರಂಗಾ ರಾರಾಜಿಸುತ್ತಿದ್ದು, ದೇಶದ ಎಲ್ಲ ಜನತೆ ಭಾರತಾಂಬೆಗೆ ಕೈಮುಗಿಯುತ್ತಿದ್ದಾರೆ. ಇತ್ತ ಇಂದು 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿರು. ಬಳಿಕ ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಪ್ರಧಾನಿಗಳು ಮೊದಲ ಭಾಷಣ ಆರಂಭಿಸುತ್ತಿದ್ದಂತೆ ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ದೇಶವು ಸ್ಮರಿಸುತ್ತಿದೆ. ಏಕೆಂದರೆ ದೇಶವು ಇವರೆಲ್ಲರಿಗೂ ಋಣಿಯಾಗಿದೆ ಎಂದು ದೇಶದ ಜನತೆಗೆ ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯ ಕೋರಿದರು.
ಇದೇ ವೇಳೆ ಭಾರತದ ಮೊದಲ ಪ್ರಧಾನಿ ನೆಹರೂ ಸ್ಮರಿಸಿದ ಮೋದಿ, ದೇಶವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಿದ ಸರ್ದಾರ್ ವಲ್ಲಭಬಾಯಿ ಪಟೇಲ್, ಭಾರತಕ್ಕೆ ಭವಿಷ್ಯದ ಹಾದಿಯನ್ನು ತೋರಿಸಿದ ಬಾಬಾಸಾಹೇಬ್ ಅಂಬೇಡ್ಕರ್ – ದೇಶವು ಇಂತಹ ಪ್ರತಿಯೊಬ್ಬರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನೆನಪಿಸಿಕೊಳ್ಳುತ್ತದೆ ಎಂದರು.
ಮುಂದುವರೆದು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದು ತಂದವರನ್ನು ಶ್ಲಾಘಿಸಿ, ಅವರು ಕೇವಲ ನಮ್ಮ ಹೃದಯವನ್ನು ಗೆದ್ದಿಲ್ಲ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ ಎಂದರು.
ಇನ್ನು ಕೊರೊನಾ ಸಂಕಷ್ಟವನ್ನು ಸ್ಮರಿಸುತ್ತಾ ಭಾಷಣ ಮುಂದುವರೆಸಿದ ಮೋದಿ, ದೇಶದ ಜನರು ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹಳ ತಾಳ್ಮೆಯಿಂದ ಹೋರಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಜನರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಇಂದು ಭಾರತದಲ್ಲಿ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ನಡೆಸಲಾಗುತ್ತಿದೆ. ಇದುವರೆಗೆ 54 ಕೋಟಿಗೂ ಹೆಚ್ಚು ಜನರು ಲಸಿಕೆ ಡೋಸ್ ಪಡೆದಿದ್ದಾರೆ ಎಂದು ತಿಳಿಸಿದರು. ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ವಿವರಿಸಿದರು.









