ಏಕಕಾಲಕ್ಕೆ 77 ಸಾವಿರಕ್ಕೂ ಅಧಿಕ ತ್ರಿವರ್ಣಧ್ವಜ ಹಾರಾಟ | ದಾಖಲೆ ನಿರ್ಮಿಸಿದ ಭಾರತ
ಬಿಹಾರ: ಏಕಕಾಲದಲ್ಲಿ 77 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಹಾರಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ.
ಪಾಟ್ನಾದಲ್ಲಿ ನಡೆದ ಬಾಬು ವೀರ ಕುನ್ವರ್ ಸಿಂಗ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಇಷ್ಟೊಂದು ರಾಷ್ಟ್ರಧ್ವಜಗಳು ಏಕಕಾಲದಲ್ಲಿ ಹಾರಾಡಿದವು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿ ವೀರ್ ಕುನ್ವರ್ ಸಿಂಗ್ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾದರು.
ಈ ವೇಳೆ ರಾಷ್ಟ್ರಧ್ವಜಗಳನ್ನು ಏಕಕಾಲದಲ್ಲಿ ಹಾರಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
2004ರಲ್ಲಿ ಪಾಕಿಸ್ತಾನ ಏಕಕಾಲಕ್ಕೆ 57,632 ಧ್ವಜಗಳನ್ನು ಹಾರಿಸಿ ದಾಖಲೆ ಬರೆದಿತ್ತು. ಇದೀಗ ಆ ರೆಕಾರ್ಡ್ ಬ್ರೇಕ್ ಆಗಿದೆ. ವಿಜಯೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.
ಅಮಿತ್ ಶಾ ಮಾತನಾಡಿ, ವೀರ್ ಕುನ್ವರ್ ಸಿಂಗ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ವೀರ ಯೋಧರ ಸಾಹಸದ ಬಗ್ಗೆ ಭಾರತದ ಯುವಕರು ಕಲಿಯಬೇಕಾಗಿರುವುದು ತುಂಬಾ ಇದೆ ಎಂದರು.