ಬಾಕ್ಸ್ ಆಫೀಸ್ ನಲ್ಲಿ 777 ಚಾರ್ಲಿ ಕಮಾಲ್ – ಲಾಭದಲ್ಲಿ 5% ಚಾರ್ಲಿ ಪಾಲು
ಮನುಷ್ಯ ಹಾಗೂ ಶ್ವಾನದ ನಡುವಿನ ಭಾಂದವ್ಯವನ್ನ ಮನಮುಟ್ಟುವಂತೆ ತೋರಿಸಿದ ಚಿತ್ರ 777 ಚಾರ್ಲಿ. ಮೊದಲ ಚಿತ್ರದಲ್ಲೆ ಭಾವನಾತ್ಮಕ ಸಿನಿಮಾ ನೀಡುವಲ್ಲಿ ನಿರ್ದೇಶಕ ಕಿರಣ್ ರಾಜ್ ಗೆದ್ದಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಲ್ಲಾಪೆಟ್ಟಿಗೆಯಲ್ಲೂ ಚಿತ್ರ ಉತ್ತಮ ಗಳಿಕೆ ಮಾಡಿದೆ.
ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. “ಚಾರ್ಲಿ” ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿವಾಗಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಿತ್ರತಂಡ ಸುದ್ದಿಗೋಷ್ಠಿ ಮೂಲಕ ಹಂಚಿಕೊಂಡಿದೆ.
777 ಚಾರ್ಲಿ ತೆರೆಕಂಡಾಗಿನಿಂದ ಇಲ್ಲಿಯವರೆಗೂ ಒಟ್ಟಾರೆಯಾಗಿ 150 ಕೋಟಿ ಕಲೆಕ್ಷನ್ ಮಾಡಿದೆ. ಅದರಲ್ಲಿ 90 ರಿಂದ 100 ಕೋಟಿವರೆಗೂ ಲಾಭ ಗಳಿಸಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರಿಡಿಂಗ್ ವಿರುದ್ಧ ಹೋರಾಡುತ್ತಿರುವ ಹಾಗೂ ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಅಂಡ್ ಟೀಮ್ ಹೇಳಿದೆ.
ಶೇ.5ರಷ್ಟು ಎಂದರೆ ಐದು ಕೋಟಿ ರೂಪಾಯಿಗಳಷ್ಟಾಗುತ್ತದೆ. ಅದನ್ನು ನೇರವಾಗಿ ಹಂಚಿಕೆ ಮಾಡಬೇಕಾ? ಅಥವಾ ಚಾರ್ಲಿ ಹೆಸರಿನಲ್ಲಿ ಒಂದು ಅಕೌಂಟ್ ಮಾಡಿ ದುಡ್ಡಿಟ್ಟು, ಪ್ರತಿ ತಿಂಗಳು ಸಿಗುವ ಬಡ್ಡಿಯಲ್ಲಿ ಸಹಾಯ ಮಾಡಬೇಕಾ? ಎಂಬ ವಿಷಯವಾಗಿ ಇನ್ನೂ ತೀರ್ಮಾನವಾಗಿಲ್ಲ. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರಿಗೆ ಶೇ. 10ರಷ್ಟು ಲಾಭದಲ್ಲಿ ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ 10 ಕೋಟಿ ರೂಪಾಯಿಗಳಷ್ಟಾಗುತ್ತದೆ. ಈ ಪಟ್ಟಿಯಲ್ಲಿ ನಾನಿಲ್ಲ. ಏಕೆಂದರೆ, ನಾನು ಒಬ್ಬ ನಟ ಮತ್ತು ನಿರ್ಮಾಪಕನಾಗಿರುವುದರಿಂದ, ನನ್ನನ್ನು ಬಿಟ್ಟು ಮಿಕ್ಕವರಿಗೆ ಹಂಚಲಿದ್ದೇವೆ ಎಂದರು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
777 ಚಾರ್ಲಿ ಚಿತ್ರ 100ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ 25 ದಿನಗಳ ಪ್ರದರ್ಶನವನ್ನ ಮುಗಿಸಿ ಮುನ್ನುಗ್ಗುತ್ತಿದೆ.