ಇಂದು ಅಂಬೇಡ್ಕರ್ ಜಯಂತಿ. ಇತಿಹಾಸದಲ್ಲಿ ಆ ಮಹಾಪುರುಷ ಹುಟ್ಟಿದ್ದು ನಿಜಕ್ಕೂ ಭಾರತದ ಭಾಗ್ಯ. ಆದರೆ ಇಂತದ್ದೊಬ್ಬ ಪ್ರಕಾಂಡ ಪಂಡಿತ, ಪ್ರಖರ ಚಿಂತಕ, ಪ್ರಬಲ ಜಾತ್ಯಾತೀತವಾದಿ, ಪ್ರಚ್ಛನ್ನ ದೇಶಪ್ರೇಮಿ ಈ ನೆಲದಲ್ಲಿ ಹುಟ್ಟಿದ್ದರು ಎಂದರೆ ನಂಬಲಾಗ ಸಂಗತಿ. ಅಷ್ಟರಮಟ್ಟಿಗೆ ನಮ್ಮ ವ್ಯವಸ್ಥೆಯನ್ನು ನಮ್ಮ ಮನಸ್ಥಿತಿಯನ್ನು ಕಲುಷಿತಗೊಳಿಸಿಕೊಂಡಿದ್ದೇವೆ. ಆ ನಿಜವಾದ ಭಾರತ ರತ್ನ ನಮ್ಮೆಲ್ಲರ ಸರ್ವಕಾಲಿಕ ಆದರ್ಶ. ಗಾಂಧಿ ನಂತರ ಈ ನಾಡಿನ ಅಸ್ಮಿತೆ ಡಾ. ಬಾಬಾಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಎನ್ನುವ ಮಹಾತಪಸ್ವಿ.
ಸ್ಟೇಟ್ಸ್ ಮನ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಅಂಬೇಡ್ಕರ್ ರನ್ನು ಕೇವಲ ದಲಿತರ ಸ್ವಾತಂತ್ರ್ಯ, ಸ್ವಾಯತ್ತತೆ, ಸ್ವಾವಲಂಬನೆ ಹಾಗೂ ಸುಧಾರಣೆಗೆ ಶ್ರಮಿಸಿದ ಸಾಮಾಜಿಕ ಚಿಂತಕ ಎಂದೋ, ಸಂವಿಧಾನ ಶಿಲ್ಪಿ ಎಂದೋ ಸೀಮಿತ ಚೌಕಟ್ಟಿನೊಳಗೆ ಬಂಧಿಸಿಬಿಟ್ಟರೆ ಅದು ಅವರ ಪವಿತ್ರ ಆತ್ಮಕ್ಕೆ ನಾವು ಮಾಡುವ ಮಹಾದ್ರೋಹ. ಅವರು ಅಜ್ಞಾನ, ಅಸ್ಪೃಷ್ಯತೆ, ಪುರೋಹಿತಶಾಹಿತ್ವ, ಜಮೀನ್ದಾರಿ ಅಟ್ಟಹಾಸ ಮತ್ತು ಮೌಢ್ಯವೆನ್ನುವ ಕೂಪದಲ್ಲಿ ಬಿದ್ದು ನರಳುತ್ತಿದ್ದ ಇಡೀ ಜಗತ್ತನ್ನೇ ಜ್ಞಾನವೆಂಬ ಕಿರೀಟ ಹೊತ್ತು ಬೆಳಗಿದ ಸೂರ್ಯ.
ಭವಿಷ್ಯದ ಭವ್ಯ ಭಾರತದ ನಿರ್ಮಾಣದ ಈ ಕನಸುಗಾರ ಹುಟ್ಟಿದ್ದು 14 ಏಪ್ರಿಲ್ 1891. ಮಧ್ಯಪ್ರದೇಶದ ಮೂಹೂವ್ ನಲ್ಲಿ ಹುಟ್ಟಿದರೂ ಅವರು ಕೇವಲ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತರಾಗದೆ ದೇಶ ವಿಶ್ವ ಕಾಲಗಳೆಂಬ ಸೀಮೆಗಳ ದಾಟಿ ನಿಂತರು. ಭೌತಿಕವಾಗಿ ಮರೆಯಾಗಿದ್ದು 6 ಡಿಸೆಂಬರ್ 1956. ಆದರೆ ಆ ಮಹಾಪರಿನಿರ್ವಾಣವನ್ನು ನಾವೆಂದೂ ಒಪ್ಪಿಕೊಳ್ಳಲೇ ಇಲ್ಲ; ಇವತ್ತಿಗೂ ಅಂಬೇಡ್ಕರ್ ನಮ್ಮ ಹೃದಯದಲ್ಲಿ ಜೀವಂತವಿದ್ದಾರೆ.
ಬ್ಯಾರಿಸ್ಟರ್ ಅಂಬೇಡ್ಕರ್ ಪದವಿಗಳು ಬಿಎ, ಎಂಎ, ಪಿಹೆಚ್ಡಿ, ಎಲ್ ಎಲ್ ಡಿ, ಎಂಎಸ್ಸಿ, ಡಿಎಸ್ಸಿ. ಇವೆಲ್ಲವನ್ನೂ ಮೀರಿದ ಅವರ ಪದವಿ ಮಾನವೀಯತೆ. ಈ ಪದವಿಯನ್ನು ಪಡೆದ ಕೆಲವೇ ಭಾರತೀಯರಲ್ಲಿ ಅವರೂ ಒಬ್ಬರು. ಹಾಗಾಗೇ ಅವರು ಅಜರಾಮರ. ಅವರ ಹೆಸರನ್ನು ಹೇಳಿಕೊಳ್ಳುವ ಬಹಳಷ್ಟು ಜನರಿಗೆ ಇಂತದ್ದೊಂದು ಡಿಗ್ರಿ ಇರುತ್ತೆ ಅನ್ನೋ ಕಲ್ಪನೆಯೂ ಇಲ್ಲ; ಅಂತವರಿಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆಯೂ ಇಲ್ಲ.
ಶೆಡ್ಯೂಲ್ ಕ್ಯಾಸ್ಟ್ ಫೆಡರೇಷನ್, ಇಂಡಿಪೆಂಡೆಂಟ್ ಲೇಬರ್ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಂತಹ ರಾಜಕೀಯ ಪಕ್ಷಗಳನ್ನೂ ಬಹಿಷ್ಕೃತ ಹಿತಕಾರಿಣಿ ಸಭಾ, ಸಮತಾ ಸೈನಿಕ ದಳದಂತಹ ಸಾಮಾಜಿಕ ಸಂಘಟನೆಗಳನ್ನೂ ಕಟ್ಟಿದ ಅಂಬೇಡ್ಕರ್ ರಿಗೆ ಅವರದ್ದೇ ಕಾಂಗ್ರೆಸ್ ಪಕ್ಷ ಕೊಡಬೇಕಾದ ಗೌರವ ಮನ್ನಣೆ ಕೊಡಲಿಲ್ಲ ಅನ್ನುವುದು ಚಾರಿತ್ರಿಕ ಸತ್ಯ.
ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿಯದ ಅಂಬೇಡ್ಕರ್ ಬಗೆಗಿನ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
* ಅಂಬೇಡ್ಕರ್ ಅವರ ತಂದೆ ರಾಮ್ ಜಿ ಮಾಲೋಜಿ ಸಕ್ಪಾಲ್ ಹಾಗೂ ತಾಯಿ ಭೀಮಾಬಾಯಿಯವರಿಗೆ ಅವರು 14ನೆಯ ಹಾಗೂ ಕೊನೆಯ ಸಂತಾನ.
* ಅವರ ಸರ್ ನೇಮ್ ಅಂಬಾವಾಡೇಕರ್, ಅವರ ಗುರುಗಳಾದ ಮಹದೇವ್ ಅಂಬೇಡ್ಕರ್ ರಿಂದ ಅಂತಿಮವಾಗಿ ಈ ಸರ್ ನೇಮ್ ನೆಲೆನಿಂತಿತು.
* ವಿದೇಶದ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಹೆಚ್ಡಿ ಡಾಕ್ಟರೇಟ್ ಪಡೆದುಕೊಂಡ ಮೊತ್ತ ಮೊದಲ ಭಾರತೀಯ ಅಂಬೇಡ್ಕರ್.
* ಲಂಡನ್ ಮ್ಯೂಸಿಯಂನಲ್ಲಿ ಕಾರ್ಲ್ ಮಾರ್ಕ್ಸ್ ಜೊತೆ ಹೊಂದಿಕೊಂಡಂತೆ ನಿಂತಿರುವ ಏಕೈಕ ಪ್ರತಿಮೆ ಅಂಬೇಡ್ಕರ್ ರವರದ್ದು.
* ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ ಆದರೆ ನಟ್ಟ ನಡುವೆ 24 ಗೆರೆಗಳ ಅಶೋಕ ಚಕ್ರದ ಪರಿಕಲ್ಪನೆ ಕೊಟ್ಟವರು ಅಂಬೇಡ್ಕರ್.
* ನೋಬೆಲ್ ಪಾರಿತೋಷಕ ಪುರಸ್ಕೃತ ಪ್ರೊಫೆಸರ್ ಅಮರ್ತ್ಯ ಸೇನ್ ಅರ್ಥಶಾಸ್ತ್ರದ ತಮ್ಮ ಆದರ್ಶ ಬಿ.ಆರ್ ಅಂಬೇಡ್ಕರ್ ಎಂದು ಹೆಮ್ಮೆಯಿಂದ ಸಮರ್ಥಿಸಿಕೊಳ್ಳುತ್ತಾರೆ.
* ಅತ್ಯಂತ ದೊಡ್ಡ ರಾಜ್ಯಗಳಾಗಿದ್ದ ಮಧ್ಯಪ್ರದೇಶ ಮತ್ತು ಬಿಹಾರವನ್ನು ಅಭಿವೃದ್ಧಿ ಮಾಡಬೇಕಾದರೆ ಅವುಗಳನ್ನು ವಿಭಾಗಿಸಿ ಮತ್ತೆರಡು ರಾಜ್ಯಗಳನ್ನಾಗಿಸಬೇಕು. ಹೀಗಾದಾಗ ಮಾತ್ರ ಆಡಳಿತ ಸುಲಭ ಎಂದು 50 ವರ್ಷಗಳ ಹಿಂದೆಯೇ ಅಂಬೇಡ್ಕರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ ಅದು ಜಾರಿಯಾಗಿದ್ದು ಮಾತ್ರ 2000ನೇ ಇಸವಿ ನಂತರ. ಆ ರಾಜ್ಯಗಳೇ ಛತ್ತಿಸ್ ಘಡ ಮತ್ತು ಜಾರ್ಖಂಡ್.
* ವಿಶ್ವದ ಅತ್ಯಂತ ದೊಡ್ಡ ಖಾಸಗಿ ಗ್ರಂಥಾಲಯ ಅಂಬೇಡ್ಕರ್ ರದ್ದು. ಅವರ ಖಾಸಗಿ ಗ್ರಂಥಾಲಯ ರಾಜಗಿರ್ ನಲ್ಲಿ 50 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿದ್ದವು.
* ಬಾಬಾಸಾಹೇಬ್ ರಚಿಸಿದ “ವೆಯ್ಟಿಂಗ್ ಫರ್ ವೀಸಾ” ಕೊಲಂಬಿಯಾ ಯೂನಿವರ್ಸಿಟಿಯ ಪಠ್ಯವಾಗಿತ್ತು. ಅದೇ ಕೊಲಂಬಿಯಾ ಯೂನಿವರ್ಸಿಟಿ 2004ರಲ್ಲಿ ಪಟ್ಟಿ ಮಾಡಿದ ವಿಶ್ವದ 100 ಘನ ವಿದ್ವಾಂಸರಲ್ಲಿ ಅಂಬೇಡ್ಕರ್ ಹೆಸರಿತ್ತು ಮತ್ತು ಅದು ಮೊದಲ ಸ್ಥಾನದಲ್ಲಿತ್ತು.
* 64 ವಿದ್ಯೆಗಳಲ್ಲೂ ಪ್ರವೀಣ ಅಂತ ಒಂದು ಮಾತಿದೆಯಲ್ಲ ಅದು ಅಂಬೇಡ್ಕರ್ ಗೆ ಬಹಳಷ್ಟು ಹೋಲುತ್ತದೆ. ಅವರಿಗೆ ಹಿಂದಿ, ಪಾಲಿ. ಸಂಸ್ಕೃತ, ಇಂಗ್ಲೀಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಷಿಯನ್, ಗುಜರಾತಿ ಸೇರಿದಂತೆ 9 ಭಾಷೆಗಳಲ್ಲಿ ಆಳವಾದ ಜ್ಞಾನವಿತ್ತು. ಸುದೀರ್ಘ 21 ವರ್ಷ ಅವರು ವಿಶ್ವದ ಪ್ರಾದೇಶಿಕ ಭಾಷೆಗಳನ್ನು ಅಧ್ಯಯನ ಮಾಡಿದ್ದರು.
* ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಬಾಬಾಸಾಹೇಬ್ 8 ವರ್ಷಗಳ ಕಲಿಕೆಯನ್ನು ಕೇವಲ 2 ವರ್ಷ 3 ತಿಂಗಳಲ್ಲಿ ಮುಗಿಸಿದ್ದರು. ಇದಕ್ಕಾಗಿ ಅವರು ಪ್ರತಿದಿನ 21 ಗಂಟೆ ಓದುತ್ತಿದ್ದರು.
* ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ 850000 ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು. ಇದು ವಿಶ್ವದ ಅತ್ಯಂತ ದೊಡ್ಡ ಮತ ಪರಿವರ್ತನೆ.
* ಅಂಬೇಡ್ಕರರಿಗ ಬುದ್ಧಿಸಂ ಬೋಧಿಸಿದ ಗುರು ಮಹಂತ ವೀರ ಚಂದ್ರಮಣಿ ಅವರನ್ನು ಆಧುನಿಕ ಭಾರತದ ಬುದ್ದ ಎಂದು ಕರೆದಿದ್ದರು.
* ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಡಾಕ್ಟರ್ ಆಲ್ ಸೈನ್ಸ್ ಡಾಕ್ಟರೇಟ್ ಗೌರವ ಪಡೆದ ಮೊತ್ತಮೊದಲ ಏಕೈಕ ಭಾರತೀಯ ಅಂಬೇಡ್ಕರ್. ಅವರೇ ಮೊದಲು ಅವರೇ ಕೊನೆ.
* ವಿಶ್ವದಾದ್ಯಂತ ಅತ್ಯಂತ ಹೆಚ್ಚು ಪುಸ್ತಕಗಳು ಮತ್ತು ಹಾಡುಗಳು ಅಂಬೇಡ್ಕರ್ ಅನ್ನುವ ವ್ಯಕ್ತಿ, ವ್ಯಕ್ತಿತ್ವ, ಸಾಧನೆ, ಜೀವನಶೈಲಿ ಮತ್ತು ಅವರ ವೈಚಾರಿಕತೆಯ ಕುರಿತು ರಚಿಸಲಾಗಿದೆ.
* 500 ಪದವೀಧರರು ಮತ್ತು 1000 ಡಾಕ್ಟರೇಟ್ ಪಡೆದ ವಿದ್ವಾಂಸರಷ್ಟು ಪಾಂಡಿತ್ಯ ಅಂಬೇಡ್ಕರ್ ಅವರಿಗೆ ಇದೆ ಎಂದು ಮಹಾತ್ಮ ಗಾಂಧಿ ಮತ್ತು ಗವರ್ನರ್ ಲಾರ್ಡ್ ಲಿನ್ಲಿತ್ ಗೋವ್ ನಂಬಿದ್ದರು.
* 1954ರಲ್ಲಿ ನೇಪಾಳದ ಕಟ್ಮಂಡುವಿನಲ್ಲಿ ನಡೆದ ವಿಶ್ವ ಬೌದ್ಧ ಮಹಾಸಭೆಯಲ್ಲಿ ಅಂಬೇಡ್ಕರ್ ಅವರಿಗೆ ಬೌದ್ಧ ಬಿಕ್ಕುಗಳು ಬೌದ್ಧ ಧರ್ಮದ ಅತ್ಯುನ್ನತ ಗೌರವವಾದ “ಬೋಧಿಸತ್ವ” ಮನ್ನಣೆ ನೀಡಿದರು. ಅಂಬೇಡ್ಕರ್ ಬರೆದ ‘ಬುದ್ಧ ಎಂಡ್ ಹಿಸ್ ದಮ್ಮ’ ಭಾರತೀಯ ಬೌದ್ಧಿಸಂನ ಹೊಸ ದೃಕ್ಪಥ ಎಂದೇ ಅಂದಾಜಿಸಲಾಗಿದೆ.
* ಅಂಬೇಡ್ಕರ್ ತಮ್ಮ ಆದರ್ಶ, ಮಾರ್ಗದರ್ಶಕರು ಮತ್ತು ಪ್ರೇರಣೆ ಎಂದು ನಂಬಿದ್ದ ಮೂವರು ಮಹಾಪುರುಷರು ಭಗವಾನ್ ಬುದ್ಧ, ಸಂತ ಕಬೀರ ಮತ್ತು ಮಹಾತ್ಮ ಜ್ಯೋತಿಬಾ ಫುಲೆ.
* ಜಗತ್ತಿನಾದ್ಯಂತ ಅತಿ ಹೆಚ್ಚು ಪ್ರತಿಮೆಗಳಿರುವುದು ಡಾ. ಬಿ ಆರ್ ಅಂಬೇಡ್ಕರ್ ಅವರದ್ದು ಮತ್ತು ಅವರ ಜನ್ಮಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
* ಹಿಂದುಳಿದ ಅಸ್ಪೃಷ್ಯರೆನಿಸಿಕೊಂಡ ಜಾತಿಯಿಂದ ಬಂದ ಮೊತ್ತಮೊದಲ ವಕೀಲರು ಡಾ. ಬಿ ಆರ್ ಅಂಬೇಡ್ಕರ್.
* ಜಾಗತಿಕ ಸರ್ವೆಯೊಂದರ “ವಿಶ್ವ ನಿರ್ಮಾತೃ” ಪಟ್ಟಿಯಲ್ಲಿ ಹಾಗೂ 10000 ವರ್ಷಗಳ ಮಾನವೀಯತ ಹರಿಕಾರರ ಪಟ್ಟಿಯಲ್ಲಿ 4 ಸ್ಥಾನ ಪಡೆದ ಭಾರತೀಯ ಅಂಬೇಡ್ಕರ್. ಇದನ್ನು ತಯಾರಿಸಿದ್ದು ಆಕ್ಸಫರ್ಡ್ ಯೂನಿವರ್ಸಿಟಿ.
* ಅಂಬೇಡ್ಕರ್ ಬರೆದ “The Problem of Rupee-Its Origin & its solution” ಪುಸ್ತಕದಲ್ಲಿ ನೋಟು ಅಮಾನ್ಯೀಕರಣದ ಕುರಿತಾದಂತೆ ಅವರು ಹೇಳಿದ ವಿಚಾರಗಳು ಈಗಲೂ ಪ್ರಸ್ತುತ.
* ವಿಶ್ವದ ಎಲ್ಲೆಡೆ ಕಣ್ಮುಚ್ಚಿ ಧ್ಯಾನಿಸುತ್ತಿರುವ ಬುದ್ಧನ ಚಿತ್ರಗಳಿವೆ. ಆದರೆ ಅದ್ಭುತ ಚಿತ್ರಕಾರರೂ ಆಗಿದ್ದ ಅಂಬೇಡ್ಕರ್ ತಮ್ಮ ಮೊದಲ ಚಿತ್ರದಲ್ಲಿ ಕಣ್ತೆರೆದ ಬುದ್ದನ ಚಿತ್ರ ಬಿಡಿಸಿದ್ದರು.
* ಬಾಬಾಸಾಹೇಬರ ಮೊತ್ತಮೊದಲ ಪ್ರತಿಮೆ ನಿರ್ಮಾಣವಾಗಿದ್ದು 1950ರಲ್ಲಿ ಕೊಲ್ಹಾಪುರ ನಗರದಲ್ಲ. ಅಚ್ಚರಿಯ ವಿಚಾರವೆಂದರೆ ಬದುಕಿದ್ದಾಗಲೇ ಪ್ರತಿಮೆ ಸ್ಥಾಪಿಸಲ್ಪಟ್ಟ ಅಪರೂಪದ ಭಾರತೀಯ ಸಾಧಕ ಅಂಬೇಡ್ಕರ್.
ಅಂಬೇಡ್ಕರ್ ಹೆಸರಿನಲ್ಲಿ ಭೂಮಿ ನುಂಗುವ, ರೋಲ್ ಕಾಲ್ ಮಾಡುವ ಮತ್ತು ದಲಿತರ ಉದ್ಧಾರಕ್ಕಾಗಿ ಕಿಂಚಿತ್ತೂ ಪ್ರಯತ್ನಿಸದೇ ತಮ್ಮ ಸ್ವಾರ್ಥಕ್ಕಾಗಿ ಆ ಮಹಾನುಭಾವರ ಹೆಸರು ದುರ್ಬಳಕೆ ಮಾಡಿಕೊಳ್ಳುವ ಆಷಾಡಭೂತಿಗಳು ಇದನ್ನು ಓದಿಕೊಳ್ಳಲಿ. ಅಂಬೇಡ್ಕರ್ ಅನ್ನುವ ನಿಜವಾದ ಅವಧೂತ ಈ ಭೂಮಿಯಲ್ಲಿ ಹುಟ್ಟಿ 129 ವರ್ಷಗಳ ನಂತರವಾದರೂ ಕೊನೇ ಪಕ್ಷ ಅವರು ಹಾಕಿಕೊಟ್ಟ ಮಾರ್ಗ ಯಾವುದೆಂದು ಗುರುತಿಸಿದರೂ ಈ ರಾಷ್ಟ್ರದಲ್ಲಿ ದಲಿತರೇ ಇರುವುದಿಲ್ಲ.
-ವಿಭಾ (ವಿಶ್ವಾಸ್ ಭಾರದ್ವಾಜ್)
***