ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ಅಮೂಲ್ಯ ಜೀವವನ್ನು ಕಸಿದುಕೊಂಡಿದೆ. ಈ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ, ಅಲ್ಲಿ ರೂಪಾ ಎಂಬ 29 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರೂಪಾ, ಸುರೇಶ್ ಎಂಬಾತನನ್ನು ಕೇವಲ ಎರಡು ವರ್ಷಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದಳು. ಸುರೇಶ್ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಪ್ರಾರಂಭದಲ್ಲಿ ಅವರ ದಾಂಪತ್ಯ ಜೀವನ ಸಾಧಾರಣವಾಗಿತ್ತು. ಆದರೆ, ಕಾಲಕ್ರಮೇಣ ವರದಕ್ಷಿಣೆ ಕಿರುಕುಳ ರೂಪಾಳ ಜೀವನದ ಕನಸುಗಳನ್ನು ಕಿತ್ತುಕೊಂಡವು. ಗಂಡ ಸುರೇಶ್ ಮತ್ತು ಮನೆಯವರ ವರದಕ್ಷಿಣೆ ಬೇಡಿಕೆ, ದಿನನಿತ್ಯದ ಕಿರುಕುಳಕ್ಕೆ ರೂಪಾ ಬೇಸತ್ತಿದ್ದಳು.
ಮದುವೆಯಾಗಿ ಎರಡು ವರ್ಷಗಳ ಬಳಿಕವೂ ವರದಕ್ಷಿಣೆಯ ಆಸೆ ತಣಿಯದೆ, ಗಂಡ ಸುರೇಶ್ ಮತ್ತು ಮನೆಯವರು—ಅವಳ ಅತ್ತೆ ಮತ್ತು ಮಾವ—ರೂಪಾಳಿಗೆ ಕಿರುಕುಳ ನೀಡುತ್ತಿದ್ದರು.
ರೂಪಾ ತನ್ನ ಪ್ರಾಣವನ್ನು ಕೊನೆಗಾಣಿಸುವ ಮೊದಲು, ಡೆತ್ ನೋಟ್ ಬರೆದಿದ್ದಾಳೆ. ಆ ಡೆತ್ ನೋಟ್‌ನಲ್ಲಿ, ನನ್ನ ಸಾವಿಗೆ ನನ್ನ ಗಂಡ, ಮಾವ, ಅತ್ತೆ ಕಾರಣ ಎಂದು ಬರೆದಿದ್ದಾಳೆ. ಮದುವೆ ಸಂದರ್ಭದಲ್ಲಿ 100ಗ್ರಾಂ ಒಡವೆ ನೀಡಿದ್ದೇವೆ. ಆದರೂ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರೆಂದು ರೂಪ ಮನೆಯವರು ಆರೋಪಿಸಿದ್ದಾರೆ
ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ತನಿಖೆಯನ್ನು ಕೈಗೆತ್ತಿಕೊಂಡು, ರೂಪಾಳ ಸಾವಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆರೋಪಿತರನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲಸ ನಡೆಯುತ್ತಿದೆ.






