ಹೈದರಾಬಾದ್ : ಕಳೆದ ಎರಡು ದಿನಗಳಲ್ಲಿ ಒಂದೇ ಬಾವಿಯಲ್ಲಿ ಬರೋಬ್ಬರಿ ಒಂಬತ್ತು ಮೃತದೇಹಗಳು ಪತ್ತೆಯಾಗಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರ್ರೆಕುಂಟಾ ಗ್ರಾಮದಲ್ಲಿನಡೆದಿದೆ.
ಮೃತರನ್ನು ಪಶ್ಚಿಮ ಬಂಗಾಳದ ಮಕ್ಸೂದ್ ಆಲಂ (50), ಪತ್ನಿ ನಿಶಾ (45), ಮಕ್ಕಳಾದ ಶಬಾಜ್ (21) ಮತ್ತು ಸೊಹೈಲ್ (20), ಮಗಳು ಬುಶ್ರಾ (22) ಮತ್ತು ಬುಶ್ರಾಳ ಮೂರು ವರ್ಷದ ಮಗ ಎಂದು ಗುರುತಿಸಲಾಗಿದೆ. ಇತರರು ಶ್ರೀರಾಮ್ (35), ಶ್ಯಾಮ್ (40) ಮತ್ತು ಶಕೀಲ್ (40) ಮೃತರಾಗಿದ್ದು, ಶ್ರೀರಾಮ್ ಮತ್ತು ಶ್ಯಾಮ್ ಬಿಹಾರ ಮೂಲದವರು. ಶಕೀಲ್ ಸ್ಥಳೀಯರಾಗಿದ್ದು, ಹತ್ತಿರದ ಕಾರ್ಖಾನೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಗುರುವಾರ ಬಾವಿಯಲ್ಲಿ ನಾಲ್ಕು ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದರು. ಶುಕ್ರವಾರ ಬಾವಿಯಲ್ಲಿ ಮತ್ತೊಂದು ಮೃತದೇಹ ತೇಲಿ ಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಬಾವಿಯಿಂದ ಸಂಪೂರ್ಣವಾಗಿ ನೀರನ್ನು ಹೊರಹಾಕಿದ್ದಾರೆ. ಆಗ ಮತ್ತೆ ನಾಲ್ಕು ಮೃತದೇಹಗಳು ಬಾವಿಯಲ್ಲಿ ಕಾಣಿಸಿದ್ದು, ಅವುಗಳನ್ನು ಹೊರತೆಗೆದಿದ್ದಾರೆ. ಈ ಮೂಲಕ ಒಂದೇ ಬಾಯಿಯಲ್ಲಿ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ.
ಅಂದ್ಹಾಗೆ ಮೃತ ಮಕ್ಸೂದ್ ಮತ್ತು ಅವರ ಕುಟುಂಬ 20 ವರ್ಷಗಳ ಹಿಂದೆ ವಾರಂಗಲ್ ನಗರದ ಕರೀಮ್ ಬಾದ್ ನಲ್ಲಿ ನೆಲೆಸಿದ್ದು, ಮಕ್ಸೂದ್ ಮತ್ತು ಆತನ ಪತ್ನಿ ನಿಶಾ ಗೊರ್ರೆಕುಂಟಾದಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ನಿರ್ಬಂಧದಿಂದ ಕುಟುಂಬವು ನಗರದ ಕರೀಮ್ ಬಾದ್ ನಲ್ಲಿರುವ ತಮ್ಮ ಬಾಡಿಗೆ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾರ್ಖಾನೆ ಮಾಲೀಕ ಗೋಡೌನ್ ನಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದ. ಇನ್ನೂ ಶ್ರೀರಾಮ್ ಮತ್ತು ಶ್ಯಾಮ್ ಕಟ್ಟಡದ ಟೆರೇಸ್ ನಲ್ಲಿರುವ ರೂಮಿನಲ್ಲಿ ವಾಸಿಸುತ್ತಿದ್ದರು.
ಈ ಮಧ್ಯೆ ಕಳೆದ ಗುರುವಾರ ಕಾರ್ಖಾನೆಯ ಮಾಲೀಕ ಗೋಡೌನ್ ಗೆ ಬಂದಿದ್ದು, ಅಲ್ಲಿ ಮಕ್ಸೂದ್ ಕುಟುಂಬದವರು ಇಲ್ಲದಿರುವುದನ್ನು ಗಮನಿಸಿ ಗೀಸುಗೊಂಡಾ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ವೇಳೆ ಗೋಡೌನ್ ಪಕ್ಕದ ಬಾವಿಯಲ್ಲಿ ನಾಲ್ಕು ಮೃತದೇಹಗಳು ತೇಲಿ ಬಂದಿದೆ ಪೊಲೀಸ್ ಅಧಿಕಾರಿ ವಿ.ರವೀಂದ್ರ ತಿಳಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಗಳಿಂದ ಕುಟುಂಬ ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.








