ಕೊರೊನಾ ಸೋಂಕು ಹರಡುವುದನ್ನು ತಡೆಯಲು ಭಾರತ ಸರ್ಕಾರ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದರಿಂದ ದೇಶಕ್ಕೆ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 21 ದಿನಗಳ ಲಾಕ್ ಡೌನ್ ನಿಂದಾಗಿ ಭಾರತ ಸುಮಾರು 120 ಬಿಲಿಯನ್ ಕಳೆದುಕೊಳ್ಳಲಿದೆ. ಅಂದರೆ ಅಂದಾಜು ಭಾರತದ ಶೇ.4 ರಷ್ಟು ಜಿಡಿಪಿ ನಷ್ಟವಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ಕುರಿತಂತೆ ಬ್ರಿಟಿಷ್ ಬ್ರೋಕರೇಜ್ ಬಾಕ್ಲೇðಸ್ ತನ್ನ ವರದಿ ನೀಡಿದ್ದು, ಭಾರತದಲ್ಲಿ ಘೋಷಣೆ ಮಾಡಿರುವ ಮೂರು ವಾರಗಳ ಲಾಕ್ಡೌನ್ನಿಂದಾಗಿ 120 ಬಿಲಿಯನ್ ನಷ್ಟವಾಗಲಿದೆ. ದೇಶದ ಜಿಡಿಪಿ ಮೌಲ್ಯದ ಶೇ.4 ರಷ್ಟು ಹಣ ನಷ್ಟ ಉಂಟಾಗಲಿದೆ. ಹೀಗಾಗಿ ಈಗಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸುವ ಅಗತ್ಯವಿದೆ ಎಂದು ಹೇಳಿದೆ.
ಇದಲ್ಲದೆ ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಪ್ರಕಟಿಸಲಿರುವ ರಿಸರ್ವ್ ಬ್ಯಾಂಕ್ ಹೆಚ್ಚಿನ ದರ ಕಡಿತ ಮಾಡಲು ಸಜ್ಜಾಗಿದೆ. ಹಣಕಾಸಿನ ಕೊರತೆಯ ಗುರಿಗಳನ್ನು ಸಹ ಮರು ಪರಿಶೀಲಿಸಲಾಗುವುದು. ಬಡ್ಡಿದರ ಇಳಿಕೆಯಿಂದಾಗಿ ಇಎಂಐ ಹೊಂದಿರುವವರಿಗೆ ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.








