ಚೀನಾದಲ್ಲಿ ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡ 90% ಜನರ ಶ್ವಾಸಕೋಶಕ್ಕೆ ಹಾನಿ
ವುಹಾನ್, ಅಗಸ್ಟ್ 7: ಚೀನಾದ ವುಹಾನ್ ನಗರದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಕನಿಷ್ಠ 90 ಪ್ರತಿಶತದಷ್ಟು ಜನರ ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ವುಹಾನ್ ವಿಶ್ವವಿದ್ಯಾಲಯದ ಝೋಗ್ನಾನ್ ಆಸ್ಪತ್ರೆಯ ತಂಡವು ಏಪ್ರಿಲ್‌ನಿಂದ ಚೇತರಿಸಿಕೊಂಡ ರೋಗಿಗಳ ಭೇಟಿಯಾಗುತ್ತಿದೆ . ಒಂದು ವರ್ಷದ ಕಾರ್ಯಕ್ರಮದ ಮೊದಲ ಹಂತ ಜುಲೈನಲ್ಲಿ ಮುಗಿದಿದ್ದು ಸರಾಸರಿ 55 ವರ್ಷ ಪ್ರಾಯದವರನ್ನು ಭೇಟಿಯಾಗಿದೆ.
ಮೊದಲ ಹಂತದ ಫಲಿತಾಂಶಗಳು 90 ಪ್ರತಿಶತದಷ್ಟು ರೋಗಿಗಳ ಶ್ವಾಸಕೋಶಗಳು ಇನ್ನೂ ಹಾನಿಗೊಳಗಾದ ಸ್ಥಿತಿಯಲ್ಲಿವೆ ಎಂದು ಬಹಿರಂಗಪಡಿಸಿದೆ. ಅಂದರೆ ಅವರ ಶ್ವಾಸಕೋಶದ ವಾತಾಯನ ಮತ್ತು ಅನಿಲ ವಿನಿಮಯ ಕಾರ್ಯಗಳು ಆರೋಗ್ಯವಂತ ಜನರ ಮಟ್ಟಕ್ಕೆ ಚೇತರಿಸಿಕೊಂಡಿಲ್ಲ ಎಂದು ವರದಿ ಗಳು ತಿಳಿಸಿವೆ.
ಆಸ್ಪತ್ರೆಯ ತೀವ್ರ ನಿಗಾ ಘಟಕದ ನಿರ್ದೇಶಕ ಪೆಂಗ್ ಜಿಯಾಂಗ್ ನೇತೃತ್ವದ ತಂಡವು ರೋಗಿಗಳೊಂದಿಗೆ ಆರು ನಿಮಿಷಗಳ ವಾಕಿಂಗ್ ಪರೀಕ್ಷೆಯನ್ನು ನಡೆಸಿತು. ಚೇತರಿಸಿಕೊಂಡ ರೋಗಿಗಳಿಗೆ ಆರು ನಿಮಿಷಗಳಲ್ಲಿ 400 ಮೀಟರ್ ಮಾತ್ರ ನಡೆಯಲು ಸಾಧ್ಯವಾಯಿತು. ಆದರೆ ಆರೋಗ್ಯವಂತರು ಅದೇ ಅವಧಿಯಲ್ಲಿ 500 ಮೀಟರ್ ನಡೆಯಬಹುದಾಗಿದೆ.
ಚೇತರಿಸಿಕೊಂಡ ಕೆಲವು ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಮೂರು ತಿಂಗಳ ನಂತರವೂ ಆಮ್ಲಜನಕ ಯಂತ್ರಗಳನ್ನು ಅವಲಂಬಿಸಬೇಕಾಯಿತು ಎಂದು ಬೀಜಿಂಗ್ ಚೈನೀಸ್ ಮೆಡಿಸಿನ್ ವಿಶ್ವವಿದ್ಯಾಲಯದ ಡಾಂಗ್ ಝೈಮೆನ್ ಆಸ್ಪತ್ರೆಯ ವೈದ್ಯ ಲಿಯಾಂಗ್ ಟೆಂಗ್ಕ್ಸಿಯಾವೊ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟ ಚೇತರಿಸಿಕೊಂಡ ರೋಗಿಗಳೊಂದಿಗೆ ಲಿಯಾಂಗ್ ಅವರ ತಂಡವು ಮುಂದಿನ ಭೇಟಿಗಳನ್ನು ನಡೆಸುತ್ತಿದೆ. 100 ರೋಗಿಗಳಲ್ಲಿ ಶೇಕಡಾ 10 ರಷ್ಟು ಜನರಲ್ಲಿ ಕೊರೋನವೈರಸ್ ಸೋಂಕಿನ ವಿರುದ್ಧದ ಪ್ರತಿಕಾಯಗಳು ಕಾಣುತ್ತಿಲ್ಲ ಎಂದು ಫಲಿತಾಂಶಗಳು ತೋರಿಸಿಕೊಟ್ಟವು. ಅವರಲ್ಲಿ ಐದು ಪ್ರತಿಶತದಷ್ಟು ಜನರು ಕೋವಿಡ್-19 ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳಲ್ಲಿ ಋಣಾತ್ಮಕ ಫಲಿತಾಂಶಗಳನ್ನು ಪಡೆದರು ಆದರೆ ಇಮ್ಯುನೊಗ್ಲಾಬ್ಯುಲಿನ್ M (IgM) ಪರೀಕ್ಷೆಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆದರು. ಆದ್ದರಿಂದ ಅವರನ್ನು ಮತ್ತೆ ನಿರ್ಬಂಧಿಸಬೇಕಾಗಿದೆ ಎಂದು ವರದಿ ತಿಳಿಸಿದೆ.
ಐಜಿಎಂ ಸಾಮಾನ್ಯವಾಗಿ ವೈರಸ್ ದಾಳಿ ಮಾಡಿದಾಗ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ಮೊದಲ ಪ್ರತಿಕಾಯವಾಗಿದೆ. ಐಜಿಎಂ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ವೈರಸ್ ಸೋಂಕಿಗೆ ಒಳಗಾಗಿದ್ದಾನೆ ಎಂದರ್ಥ.
100 ರೋಗಿಗಳ ರೋಗನಿರೋಧಕ ವ್ಯವಸ್ಥೆಗಳು ಕಡಿಮೆ ಮಟ್ಟದ ಬಿ ಜೀವಕೋಶಗಳನ್ನು ತೋರಿಸಿದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಗಳು ಇನ್ನೂ ಚೇತರಿಸಿಕೊಳ್ಳುತ್ತಿವೆ ಎಂದು ಫಲಿತಾಂಶಗಳು ಬಹಿರಂಗಪಡಿಸಿದವು ಎಂದು ಪೆಂಗ್ ಹೇಳಿದರು.
ರೋಗಿಗಳು ಖಿನ್ನತೆ ಮತ್ತು ಅಸ್ಪೃಶ್ಯ ಭಾವನೆಯನ್ನು ಸಹ ಅನುಭವಿಸಿದರು. ಚೇತರಿಸಿಕೊಂಡ ಹೆಚ್ಚಿನ ರೋಗಿಗಳು ತಮ್ಮ ಕುಟುಂಬಗಳು ಒಂದೇ ಟೇಬಲ್‌ನಲ್ಲಿ ಅವರೊಂದಿಗೆ ಆಹಾರ ಸೇವನೆ ಮಾಡಲು ಸಿದ್ಧರಿಲ್ಲ ಎಂದು ತಂಡಕ್ಕೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.