ಪಿಂಚಣಿ ಹಣಕ್ಕಾಗಿ ಪತ್ನಿಯನ್ನು ಕೊಂದ 92ರ ವೃದ್ಧ!
ಹೈದರಾಬಾದ್ : ಪಿಂಚಣಿ ಹಣಕ್ಕಾಗಿ 92ರ ವೃದ್ಧ ತನ್ನ ಪತ್ನಿಯನ್ನೇ ಕೊಂದಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ ನ ಯಲವರ್ರು ಗ್ರಾಮದಲ್ಲಿ ನಡೆದಿದೆ.
90 ವರ್ಷದ ಅಪ್ರಾಯಮ್ಮ ಮೃತ ವೃದ್ಧೆಯಾಗಿದ್ದು, 92 ವರ್ಷದ ಎಂ.ಸ್ಯಾಮುಯೆಲ್ ಕೊಲೆ ಆರೋಪಿಯಾಗಿದ್ದಾನೆ. ಇದ್ಯ ಈತನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಂಧ್ರ ಸರ್ಕಾರ ಪ್ರತಿ ಕುಟುಂಬದ ಬಬ್ಬ ಹಿರಿಯ ಸದಸ್ಯನಿಗೆ ತಿಂಗಳಿಗೆ 2,250 ರೂ. ಪಿಂಚಣಿ ನೀಡುತ್ತೆ. ಈ ಹಿನ್ನೆಲೆಯಲ್ಲಿ ಸ್ಯಾಮ್ಯುಯೆಲ್ ಪತ್ನಿ ಅಪ್ರಾಯಮ್ಮ ಅವರು ಪ್ರತಿ ತಿಂಗಳ ಮೊದಲ ವಾರದಲ್ಲಿ ಹಣವನ್ನು ಸ್ವೀಕರಿಸಲು ನೋಂದಾವಣೆ ಮಾಡಿದ್ದರು. ಅದರಂತೆ ಅವರಿಗೆ ಪ್ರತಿ ತಿಂಗಳು ಹಣ ಬರುತ್ತಿತ್ತು. ಆದ್ರೆ ಇದೇ ವಿಚಾರವಾಗಿ ಸ್ಯಾಮುವೆಲ್ ಹಾಗೂ ಅಪ್ರಾಯಮ್ಮ ನಡುವೆ ಪದೇ ಪದೇ ಜಗಳವಾಗುತ್ತಿತ್ತು.
ಅದರಂತೆ ನವೆಂಬರ್ 1 ರಂದು ಅಪ್ರಾಯಮ್ಮ ಅವರಿಗೆ ಹಣ ಬಂದಿದ್ದು, ಸ್ಯಾಮುಯೆಲ್ ಪಿಂಚಣಿ ಹಣ ಕೇಳಿದ್ದಾನೆ. ಈ ವೇಳೆ ಅಪ್ರಾಯಮ್ಮ ಪಿಂಚಣಿಯ ಸ್ವಲ್ಪ ಹಣ ಮಾತ್ರ ಸ್ಯಾಮುಯೆಲ್ ಗೆ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ವೃದ್ಧ ಅಲ್ಲಿಂದ ಜಗಳ ಮಾಡಿಕೊಂಡು ಹೊರಟು ಹೋಗಿದ್ದಾನೆ. ಹೀಗೆ ಹೋದವನು ಮರುದಿನ ಮುಂಜಾನೆ ವಾಪಸ್ ಬಂದು ಅಪ್ರಾಯಮ್ಮನನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ.
ಅಲ್ಲದೇ ಕೊಲೆ ಬಳಿಕ ಸ್ಯಾಮುಯೆಲ್ ತನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಈ ಬಗ್ಗೆ ತಿಳಿಸಿದ್ದಾನೆ. ಆದ್ರೆ ಮೊದಲು ಯಾರು ಈ ವೃದ್ಧನ ಮಾತು ನಂಬಿರಲಿಲ್ಲ. ಕೊನೆಗೆ ನೆರೆಹೊರೆಯವರು ಅಪ್ರಾಯಮ್ಮನ ಸಾವಿನ ಸುದ್ದಿ ಹಬ್ಬಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು, ಸ್ಯಾಮ್ಯುಯೆಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಸ್ಯಾಮ್ಯುಯೆಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.