ಜಿ.ಟಿ.ದೇವೇಗೌಡ `ತೆನೆ’ ಇಳಿಸಿ `ಕೈ’ ಹಿಡಿಯೋದು ಪಕ್ಕಾ
ಮೈಸೂರು : ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಸ್ವತಃ ಜಿ ಟಿ ದೇವೇಗೌಡ ಅವರೇ ಕಾಂಗ್ರೆಸ್ ಪಕ್ಷ ಸೇರುವುದಾಗಿ ಖಚಿತ ಪಡಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಈಗಾಗಲೇ ನನ್ನೊಂದಿಗೆ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಮಾತನಾಡಿದ್ದಾರೆ. ಇದರ ಬಗ್ಗೆ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರ ಗಮನಕ್ಕೆ ತಂದಿದ್ದೀನಿ. ಆದರೆ, ಅವರು ನನ್ನೊಂದಿಗೆ ಮಾತನಾಡಿಲ್ಲ. ನನ್ನ ಮಗ ಹರೀಶ್ ಗೌಡನ ರಾಜಕೀಯ ಜೀವನ ಭದ್ರ ಮಾಡಿಕೊಂಡು ಖಚಿತ ಪಡಿಸುತ್ತೇನೆ ಎಂದರು.
ಕಾಂಗ್ರೆಸ್ ನಲ್ಲಿ ಬಣ ರಾಜಕೀಯವಿಲ್ಲ, ಒಗ್ಗಟ್ಟಿದೆ. ಅಭಿಮಾನಿಗಳಲ್ಲಿ ಬಣ ಮಾಡಿಕೊಂಡಿರಬಹುದು. ಆದರೆ ನಾಯಕರಲ್ಲಿ ಬಣ ರಾಜಕೀಯವಿಲ್ಲ. ಒಗ್ಗಟ್ಟಿನಿಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ಮಾಡಿದ್ದೇನೆ.
ನಾನು ಕಾಂಗ್ರೆಸ್ ಗೆ ಬಂದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ತಾವು ಸ್ಪರ್ಧಿಸಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನನಗೆ ಹಾಗೂ ನನ್ನ ಮಗ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ಕೇಳಿದ್ದೇನೆ. ಇಬ್ಬರಿಗೂ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಕುಮಾರಸ್ವಾಮಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಜಿ.ಟಿ.ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಿನಿಂದ ಮಾನಸಿಕವಾಗಿ ನನಗೆ ಸಾಕಷ್ಟು ನೋಯಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕೊಡಗಿಗೆ ಹೋಗಿದ್ದಾಗ ನನಗೆ ಮನಸೋ ಇಚ್ಛೆ ಮಾತನಾಡಿದ್ದಾರೆ. ಅವರ ಮಾತುಗಳನ್ನು ಸಹಿಸಿಕೊಂಡು ಬಂದಿದ್ದೀನಿ ಎಂದು ಬೇಸರ ಹೊರಹಾಕಿದರು.









