ದೋಣಿ ಮುಳುಗಡೆಯಾಗಿ 20 ಮಂದಿ ನಾಪತ್ತೆ
ಪಾಟ್ನಾ : ದೋಣಿ ಮುಳುಗಡೆಯಾಗಿ 20 ಮಂದಿ ನಾಪತ್ತೆಯಾಗಿರುವ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಘಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಅಧಿಕಾರಿಯ ಮಾಹಿತಿ ಪ್ರಕಾರ, ದಿಯಾರಾ ಪ್ರದೇಶದಲ್ಲಿರುವ ವಿವಿಧ ಗ್ರಾಮಗಳಿಂದ ಬಾಘಾ ನಗರದ ದೀನ್ ದಯಾಳ್ ಘಾಟ್ಗೆ ದೋಣಿಯಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು.
ದೋಣಿ ಗಂಡಕ್ ನದಿಯ ಮಧ್ಯಕ್ಕೆ ತಲುಪಿದಾಗ ತೀವ್ರವಾಗಿ ಗಾಳಿ ಬೀಸಿದೆ. ಪರಿಣಾಮ ಅಲೆಗಳು ಉಂಟಾಗಿ ದೋಣಿ ಮಗುಚಿದೆ.

ಈ ಸಂದರ್ಭದಲ್ಲಿ 5 ಮಂದಿ ಈಜಿ ದಡ ಸೇರಿದ್ದು, ಉಳಿದ 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎಸ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಧಾವಿಸಿದ್ದು, ಸದ್ಯ ನಾಪತ್ತೆಯಾಗಿರುವ ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.








