ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ದಿನೇಶ್ ಗುಂಡೂರಾವ್ ಅವರೇ ಮುಂದುವರಿಯುತ್ತಾರಾ? ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರಿಗೆ ಮತ್ತೆ ನಿರಾಸೆ ಕಾದಿದ್ಯಾ? ಸದ್ಯ ಈ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿದ ಹೇಳಿಕೆ. ಹೌದು, ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ದೆಹಲಿ ಚುನಾವಣೆಯಲ್ಲಿ ಬ್ಯೂಸಿ ಇದ್ದ ಕಾರಣ ನೇಮಕ ವಿಳಂಬವಾಗಿದೆ. ಕೆಪಿಸಿಸಿಗೆ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾರೆ. ಹೊಸ ಅಧ್ಯಕ್ಷರ ನೇಮಕ ಆಗಬಹುದು ಇಲ್ಲದೇ ಇದ್ರೆ ದಿನೇಶ್ ಗುಂಡೂರಾವ್ ಅವರೇ ಮುಂದುವರಿಯುವ ಸಾಧ್ಯತೆಗಳಿವೆ ಎಂದ್ರು..
ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ನಾನಾ ಪ್ರಶ್ನೆಗಳಿಗೆ ನಾಂದಿ ಆಡಿದ್ದು, ಭಾರಿ ಚರ್ಚೆಗಳಿಗೆ ಕಾರಣವಾಗಿದೆ. ಅಲ್ಲದೇ ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರೇ ಮುಂದುವರಿದರೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾದಂತೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸಾರಥಿ ಯಾರಾಗ್ತಾರೆ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ ಮೂಡಿತ್ತು. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲೇ ಮುಸುಕಿನ ಗುದ್ದಾಟವೂ ನಡೆಯಿತು. ಅದರಲ್ಲೂ ಮಾಜಿ ಕೆ ಹೆಚ್ ಮುನಿಯಪ್ಪ, ಮಾಜಿ ಸಚಿವ ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅವರು ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ನಡೆಸಿದ್ರು. ನಾನು ಯಾವ ಹುದ್ದೆಯ ಆಕಾಂಕ್ಷಿಯಲ್ಲ ಎನ್ನುತ್ತಲೇ ಅಧ್ಯಕ್ಷರ ಕುರ್ಚಿ ಮೇಲೆ ಕರ್ಚಿಫ್ ಹಾಕಿದ್ದ ಡಿಕೆ ಶಿವಕುಮಾರ್, ಹೈಕಮಾಂಡ್ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದರು. ಇನ್ನೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ತಮ್ಮ ಆಪ್ತರಿಗೆ ಅಧ್ಯಕ್ಷಗಿರಿ ಕೊಡಿಸಬೇಕೆಂದು ನಾನಾ ಪ್ರಯತ್ನಗಳನ್ನು ಮಾಡಿದ್ದರು. ಆದ್ರೆ ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಹೆಸರು ಗಟ್ಟಿಯಾಗಿ ಕೇಳಿಬಂತು. ಇನ್ನೇನು ಡಿಕೆಶಿ ರಾಜ್ಯ ಕಾಂಗ್ರೆಸ್ ಸಾರಥಿ ಆಗಿಯೇಬಿಟ್ಟರು ಎನ್ನುವಷ್ಟರಲ್ಲಿ ಹೈಕಮಾಂಡ್ ಈ ವಿಚಾರವಾಗಿ ಗಪ್ ಚುಪ್ ಆಗಿಬಿಡ್ತು. ಇದರಿಂದ ರಾಜ್ಯದ ನಾಯಕರೂ ಸಹ ಬಾಯಿಗೆ ಬೀಗ ಹಾಕಿಕೊಂಡದ್ರು.
ಇದೀಗ ಸ್ವತಃ ಅಧ್ಯಕ್ಷಗಾದಿಯ ಆಕಾಂಕ್ಷಿಯಾಗಿದ್ದ ಸತೀಶ್ ಜಾರಕಿಹೊಳಿಯೇ ದಿನೇಶ್ ಗುಂಡೂರಾವ್ ಅವರು ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.