ಅಕ್ಟೋಬರ್ 2ಕ್ಕೆ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ Vijayanagar saaksha tv
ಹೊಸಪೇಟೆ : ಮಹಾತ್ಮ ಗಾಂಧೀಜಿ ಅವರ ಜನ್ಮದಿನವಾದ ಅಕ್ಟೋಬರ್ ಎರಡರಂದು ವಿಜಯನಗರ ಜಲ್ಲೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ವಿಜಯನಗರ ಜಿಲ್ಲೆಯ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಕುರಿತು ಸಚಿವ ಆನಂದ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮ ಎರಡು ದಿನ ನಡೆಯಲಿದ್ದು, ವಿಜಯನಗರ ರಚನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಹಾಲಿ, ಮಾಜಿ ಶಾಸಕ, ಸಚಿವರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಅಕ್ಟೋಬರ್ 2ರ ನಂತರ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ತಿಳಿಸಿದ ಸಚಿವರು, ಎಸ್ಪಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಆರಂಭಿಸಲಾಗುವುದು ಎಂದರು.









